ಮಡಿಕೇರಿ, ಆ. 20: ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೇವಲ 90 ಕಿ.ಮೀ. ದೂರದ ಕೇರಳದ ಮಟ್ಟನೂರಿನಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತುತ್ತಿದ್ದು, 2017ರ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ.ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಮೈಸೂರು-ಮಂಗಳೂರು ಹಾಗೂ ಕೇರಳ ಚೇಂಬರ್‍ನ ಪದಾಧಿಕಾರಿಗಳ ಸಭೆಯನ್ನು ತಾ. 18 ರಂದು ಕೇರಳದ ಕಣ್ಣೂರಿನಲ್ಲಿ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯವರು ನಡೆಸಿದ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತುಳಸಿ ದಾಸ್ ಅವರು ಯೋಜನೆ ಕುರಿತು ಮಾಹಿತಿ ಇತ್ತರು.

ಪ್ರಸ್ತುತ ಸುಮಾರು 2000 ಎಕರೆ ಪ್ರದೇಶದಲ್ಲಿ 1892 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿದ್ದು, ಇನ್ನು 4000 ಮೀಟರ್ ರನ್‍ವೇ ಅನ್ನು ಸೇರಿಸುವ ಪ್ರಸ್ತಾವನೆ ಇರುವದಾಗಿ ವಿವರಿಸಿದರು. ಕೊಡಗಿನಲ್ಲಿ ಪ್ರವಾಸೋದ್ಯಮ, ಪುಷ್ಪೋದ್ಯಮ, ರಫ್ತು ಹಾಗೂ ಇತರ ಕ್ಷೇತ್ರಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದ್ದು, ಕೊಡಗಿನ ಜನತೆ ಸಹಕರಿಸುವಂತೆ ಕೋರಿದರು. ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಹಾಗೂ ಬೃಹತ್ ವಿಮಾನ ನಿಲ್ದಾಣವಾಗಿ ಮಾರ್ಪಾಡಾಗಲಿದ್ದು, ಪ್ರಯಾಣಿಕ ಸ್ನೇಹಿ ಧ್ಯೇಯ ಹೊಂದಿರುವದಾಗಿ ತಿಳಿಸಿದರು.

ಕೊಡಗಿನಲ್ಲಿ ಕಚೇರಿಗೆ ಸಲಹೆ

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಪರವಾಗಿ ಮಾತನಾಡಿದ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರು ಕೊಡಗು ಮಟ್ಟನೂರು ರಸ್ತೆ ಅಗಲೀಕರಣವಾಗಬೇಕೆಂದರು. ಬಾಡಿಗೆ ವಾಹನಗಳಿಗೆ ಕೇರಳ ಸರಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು, ಇದನ್ನು ಕಡಿಮೆಗೊಳಿಸಬೇಕು, ಕೊಡಗಿನಲ್ಲಿ ಈ ಯೋಜನೆ ಬಗ್ಗೆ ಪ್ರಚಾರ ಆಂದೋಲನ ನಡೆಸಬೇಕು, ಕೊಡಗಿನಲ್ಲೇ ಕಚೇರಿ ತೆರೆದು ಪ್ರವಾಸಿಗರಿಗೆ ಅನುಕೂಲ ಮಾಡಬೇಕೆಂದರು. ಕೊಡಗು ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಪರವಾಗಿ ಮಾತನಾಡಿದ ಉಪಾಧ್ಯಕ್ಷ ಬೇರೆರ ಮಂಜುನಾಥ್ ಅವರು ಕೊಡಗು ಕೇರಳ ರಸ್ತೆ ಮಧ್ಯದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲು ಹೊಟೇಲ್‍ಗಳನ್ನು ಸ್ಥಾಪಿಸುವಂತಾಗ ಬೇಕು ಎಂದರು. ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಅವರು ಕೊಡಗಿನ ಹೋಂಸ್ಟೇ, ಹೊಟೇಲ್ ಹಾಗೂ ರೆಸಾರ್ಟ್‍ಗಳ ಸಭೆಯನ್ನು ಕೊಡಗಿನಲ್ಲಿ ಕರೆದು ಮಾಹಿತಿ ನೀಡಬೇಕೆಂದರು. ವಕೀಲ ಆರ್.ಕೆ. ನಾಗೇಂದ್ರ ಬಾಬು ಅವರು ವಿಮಾನ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ಹೆಚ್ಚಾಗದಂತೆ ನೋಡಿಕೊಳ್ಳಲು ಸಲಹೆ ನೀಡಿದರು.

ನಾರ್ಥ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಸಿ.ವಿ. ದೀಪಕ್ ಸ್ವಾಗತ, ಅಧ್ಯಕ್ಷ ಸುಶೀಲ್ ಅರೂನ್ ಪ್ರಾಸ್ತಾವಿಕ, ಸಂಘಟನಾ ಕಾರ್ಯದರ್ಶಿ ಮ್ಯಾಥ್ಯೂ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಕೊಡಗು ಚೇಂಬರ್ ಅಧ್ಯಕ್ಷ ಬಿ.ಎನ್. ಪ್ರಕಾಶ್, ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಕೇಶವ ಕಾಮತ್, ಮೈಸೂರು ಚೇಂಬರ್ ಅಧ್ಯಕ್ಷ ಎ.ಎಸ್. ಸತೀಶ್ ಉಪಸ್ಥಿತರಿದ್ದರು. ಕೊಡಗು ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ, ಖಜಾಂಚಿ ರವಿ ಉತ್ತಪ್ಪ, ನಿರ್ದೇಶಕರುಗಳಾದ ಬಾಬು ಚಂದ್ರ ಉಳ್ಳಾಗಡ್ಡಿ, ಕಾಶಿ ಕಾವೇರಪ್ಪ, ಕೆ.ಕೆ. ಶ್ರೀನಿವಾಸ್, ಬಿ.ಎಸ್. ಸದಾನಂದ್, ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.