ಶ್ರೀಮಂಗಲ: ತಾ. 28ರ ರಾತ್ರಿ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಈಸ್ಟ್ ನೆಮ್ಮಲೆ ಗ್ರಾಮದ ಮಾಣೀರ ಕಾವೇರಮ್ಮ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮಿಶ್ರ ತಳಿಯ ಗಬ್ಬದ ಹಸುವನ್ನು ಹುಲಿ ಧಾಳಿ ನಡೆಸಿ ಕೊಂದು ತಿಂದಿರುವ ಬೆನ್ನಲ್ಲೇ ಈ ಘಟನೆ ಸ್ಥಳದಿಂದ ಅಂದಾಜು ಒಂದು ಕಿ.ಮೀ. ದೂರದಲ್ಲಿ ಮಂಗಳವಾರ ರಾತ್ರಿ ಹುಲಿ ಧಾಳಿಯಲ್ಲಿ ಕರುವೊಂದು ಗಾಯಗೊಂಡಿರುವ ಘಟನೆ ನಡೆದಿದೆ.

ಶ್ರೀಮಂಗಲ ಗ್ರಾಮದ ಅಜ್ಜಮಾಡ ನರೇಂದ್ರ ಅವರ ಮನೆಯ ಸಮೀಪ ಕಟ್ಟಿದ್ದ ಕರುವಿನ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ. ಇದಲ್ಲದೆ ಇಲ್ಲಿಗೆ ಸಮೀಪ ಬಾದುಮಂಡ ಕಾಶಿ ಹಾಗೂ ಚಂಗುಲಂಡ ಶರಣು ಅವರಿಗೆ ಸೇರಿದ ಸಾಕು ನಾಯಿಗಳು ಹುಲಿ ಧಾಳಿಗೆ ತುತ್ತಾಗಿವೆ.

ಕರುವಿನ ಮೇಲೆ ಹುಲಿ ದಾಳಿ ನಡೆಸಿದ ಸ್ಥಳಕ್ಕೆ ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ತೆರಳಿ ಚಿಕಿತ್ಸೆ ನೀಡಿದ್ದು, ಕರುವಿನ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಕರು ಮೇವು ಸೇವಿಸುವದನ್ನು ನಿಲ್ಲಿಸಿದ್ದು, ಕುತ್ತಿಗೆ ಭಾಗಕ್ಕೆ ಆಳವಾದ ಗಾಯವಾಗಿದ್ದು ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.

2 ಹುಲಿ ಇರುವ ಸಂಶಯ: ಶ್ರೀಮಂಗಲದ ಅಜ್ಜಮಾಡ ನರೇಂದ್ರ ಅವರ ಕರುವಿನ ಮೇಲೆ ಧಾಳಿ ಮಾಡಿರುವ ಪ್ರಕರಣ ಹುಲಿ ದಾಳಿಯದ್ದೇ ಅಥವಾ ಬೇರೆ ಚಿರತೆ ಇತರ ಪ್ರಾಣಿಯದ್ದೆ ಎನ್ನುವ ಬಗ್ಗೆ ಪಶು ವೈದ್ಯಾಧಿಕಾರಿ ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ತಾ.28ರ ರಾತ್ರಿ ಈಸ್ಟ್ ನೆಮ್ಮಲೆ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ಧಾಳಿ ನಡೆಸಿದ ಪ್ರಕರಣದಲ್ಲಿ ಕನಿಷ್ಟ ಎರಡು ಹುಲಿಗಳು ಇರಬಹುದೆಂದು ಪಶುವೈದ್ಯಾಧಿಕಾರಿ ಬಿ.ಜಿ. ಗಿರೀಶ್ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಹಸುವಿನ ತಲೆ ಹಾಗೂ ಎದೆ

(ಮೊದಲ ಪುಟದಿಂದ) ಭಾಗ ಬಿಟ್ಟು ಬಹುತೇಕ ಎಲ್ಲಾ ಭಾಗವನ್ನು ತಿಂದು ಹಾಕಿರುವದನ್ನು ಗಮನಿಸಿದಾಗ ಕನಿಷ್ಟ ಪಕ್ಷ 70 ರಿಂದ 75 ಕೆ.ಜಿ ಮಾಂಸವನ್ನು ತಿಂದಿದೆ. ಒಂದೆ ಹುಲಿಯಾದರೆ ಇಷ್ಟು ಪ್ರಮಾಣದಲ್ಲಿ ತಿನ್ನುವದಿಲ್ಲ. ಒಂದೇ ಹುಲಿಯಾದರೆ 20-30 ಕೆ.ಜಿ.ಯಷ್ಟು ಮಾತ್ರ ತಿನ್ನುತ್ತಿತ್ತು. 2 ಹುಲಿಯಾಗಿರುವದರಿಂದಲೇ ಹಸುವಿನ ಬಹುತೇಕ ಭಾಗವನ್ನು ತಿಂದಿದೆ. ಹಾಗೆಯೇ ಘಟನೆ ನಡೆದ ಸ್ಥಳದ ರಸ್ತೆಯ 2 ಭಾಗದಲ್ಲಿ ಹುಲಿ ಹೆಜ್ಜೆ ಕಂಡು ಬಂದಿದ್ದು, ಒಂದಕ್ಕೊಂದು ತಾಳೆಯಾಗದೆ ಒಂದಕ್ಕಿಂತ ಹೆಚ್ಚು ಹುಲಿ ಇರಬಹುದೆಂದು ಸಂಶಯ ವ್ಯಕ್ತಪಡಿಸಿದರು.

ಬೋನಿಗೆ ಸೆರೆಯಾಗದ ಹುಲಿ: ಈಸ್ಟ್ ನೆಮ್ಮಲೆ ಹುಲಿ ದಾಳಿ ಪ್ರಕರಣದ ನಂತರ ಅರಣ್ಯ ಇಲಾಖೆ ತಾ.29 ರಂದು ಸ್ಥಳದಲ್ಲಿ ಹುಲಿ ಸೆರೆಗೆ ಬೋನು ಇರಿಸಿದೆ. ಹುಲಿ ಧಾಳಿಗೆ ತುತ್ತಾದ ಹಸುವಿನ ಉಳಿದ ಕಳೆಬರವನ್ನು ಬೋನಿನ ಒಳಗೆ ತೂಗು ಹಾಕಿ ಒಂದು ಬದಿಯಲ್ಲಿ ಬೋನಿನ ಬಾಗಿಲು ತೆರೆದಿಟ್ಟು ಸೊಪ್ಪು ಇತ್ಯಾದಿಗಳಲ್ಲಿ ಮುಚ್ಚಿ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೋನು ಇರಿಸಿ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಡು ಬಿಟ್ಟಿದ್ದು ತಾ. 29ರ ರಾತ್ರಿ ಹುಲಿ ಸೆರೆಯಾಗಬಹುದೆನ್ನುವ ನಿರೀಕ್ಷೆ ಇತ್ತು. ಆದರೆ ಬೋನಿನೆಡೆಗೆ ಹುಲಿ ಸುಳಿದಿರುವ ಯಾವದೇ ಕುರುಹು ಕಂಡುಬಂದಿಲ್ಲ. ತಾ. 30 ರಂದು ಸಹ ಬೋನು ಇರಿಸಿ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.

ಭಯಭೀತರಾದ ಗ್ರಾಮಸ್ಥರು: ಈಸ್ಟ್ ನೆಮ್ಮಲೆ ಹುಲಿ ಧಾಳಿ ಪ್ರಕರಣದ ನಂತರ ತೋಟದೊಳಗೆ ಪ್ರತ್ಯಕ್ಷವಾಗಿ ಕಾರ್ಮಿಕರ ಮೇಲೆ ಎರಗಿದ ಹುಲಿಯಿಂದ ಈ ಭಾಗದ ಜನರು ತೀವ್ರ ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ತೋಟಗಳಲ್ಲಿ ಕಾರ್ಮಿಕರು ಕೆಲಸ ಮಾಡದಂತೆ ಹಾಗೂ ರಸ್ತೆಗಳಲ್ಲಿ ಒಂಬಂಟಿಯಾಗಿ ಸಂಚರಿಸದಂತೆ ಎಚ್ಚರ ವಹಿಸಿದ್ದಾರೆ. ವಾಹನಗಳಲ್ಲಿ ಮಾತ್ರ ಜನರು ತೆರಳುತ್ತಿದ್ದು, ತಮ್ಮ ಜಾನುವಾರುಗಳು ಹಾಗೂ ಮನೆಯ ನಾಯಿಗಳನ್ನು ಹುಲಿ ಧಾಳಿಯಿಂದ ರಕ್ಷಿಸಲು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹುಲಿ ಕಾಫಿ ತೋಟದಲ್ಲಿಯೇ ಬೀಡು ಬಿಟ್ಟಿರಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಸುತ್ತಮುತ್ತ ಸಂಚರಿಸುವಾಗ ಕೋವಿ ಸಹಿತವಾಗಿ ಸಂಚರಿಸುವಂತೆ ಮಾಡಿದೆ. ಏನೇ ಆದರೂ ಹುಲಿ ಸೆರೆಯಾದರೆ ಈ ಭಾಗದ ಜನರು ಆತಂಕ ಬಿಟ್ಟು ನಿಟ್ಟುಸಿರು ಬಿಡುವಂತೆ ಮಾಡಿದೆ.