ಕುಶಾಲನಗರ, ಸೆ. 18: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನÀಡೆಸುತ್ತಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯು ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಸೋರಿಕೆಯಾಗಿದ್ದು, ಇದರಲ್ಲಿ ಇತರ ಪ್ರಬಲ ಸಮುದಾಯಗಳಾದ ವೀರಶೈವ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಜನಸಂಖ್ಯೆಯು 1 ಕೋಟಿ 87 ಲಕ್ಷವಿದೆ.

ಗಣತಿಯ ಪ್ರಕಾರ 60 ಲಕ್ಷ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯಿತರು 3ನೇ ಸ್ಥಾನದಲ್ಲಿದ್ದೇವೆ. ಸರ್ಕಾರ ಈ ವರದಿಯನ್ನು ಪ್ರಕಟಿಸಿ ಅಂಕಿ ಅಂಶಗಳ ಪ್ರಕಾರ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸುತ್ತದೆ. ಇದರಿಂದ ತಮ್ಮ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿನ್ನಡೆಯಾಗುವದು ಎಂದು ಕೊಡಗು ಜಿಲ್ಲಾ ಅಖಿ¯ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜ್ ಹೇಳಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಘಟಕದಿಂದ ಬಂದ ವರದಿ ಮಂಡಿಸುತ್ತಾ ಚಿನ್ನಪ್ಪರೆಡ್ಡಿ ಜನಗಣತಿ ವರದಿಯ ಪ್ರಕಾರ 1984 ರಲ್ಲ್ಲಿ ವೀರಶೈವ ಜನಸಂಖ್ಯೆ 62 ಲಕ್ಷ ಇತ್ತು, 32 ವರ್ಷಗಳ ಅಂತರದಲ್ಲಿ ಈ ಅಂಕಿ ಅಂಶ 60 ಲಕ್ಷಕ್ಕೆ ಇಳಿದಿದೆ. ಹಾಗಾದರೆ 2 ಲಕ್ಷ ವೀರಶೈವ ಲಿಂಗಾಯಿತರು ಸತ್ತು ಹೋಗಿದ್ದಾರಾ? ಅಥವಾ ನಾಪತ್ತೆಯಾಗಿದ್ದಾರಾ? ಸರ್ಕಾರವೇ ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಕೇಂದ್ರ ಸಮಿತಿ ಒತ್ತಾಯಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಮಾತನಾಡಿ, 2015-16ನೇ ಸಾಲಿನ ಜನಾಂಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವ ಸಮರ್ಪಣೆ ಜಿಲ್ಲಾ ಕಾರ್ಯಕ್ರಮವನ್ನು ಅ. 16 ರಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಗುರುಸಿದ್ಧ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಅಂದಿನ ಕಾರ್ಯಕ್ರಮಕ್ಕೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯಕಾರಿಣಿ ಸಮಿತಿಗೆ ಕೊಡಗು ಜಿಲ್ಲೆಯಿಂದ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಕೆ.ಸಿ. ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದಿವ್ಯಸಾನಿಧ್ಯವನ್ನು ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಸೋಮವಾರಪೇಟೆ ಮಠದ ಸ್ವಾಮೀಜಿ, ಹುಲುಸೆ ಮಠದ ಸ್ವಾಮೀಜಿ ವಹಿಸಿದ್ದರು. ಉಪಾಧ್ಯಕ್ಷೆ ಕೆ.ಎನ್. ಸಾವಿತ್ರಮ್ಮ, ವೀರಾಜಪೇಟೆ ಘಟಕದ ಅಧ್ಯಕ್ಷ ಕೆ.ಎನ್. ಸಂದೀಪ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ತೇಜಸ್ವಿ ಇದ್ದರು. ಸಭೆಯಲ್ಲಿ ವೀರಶೈವ ಬಾಂಧವರು ಭಾಗವಹಿಸಿದ್ದರು.