ಸೋಮವಾರಪೇಟೆ, ಆ. 30: ಕಳಪೆ ಕಾಮಗಾರಿಗೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಗುಣಮಟ್ಟವನ್ನು ಬದಿಗಿಟ್ಟು ಸರ್ಕಾರದ ಹಣವನ್ನು ಹೇಗೆ ಲಪಟಾಯಿಸ ಬಹುದು ಎಂಬದಕ್ಕೆ ಇದೊಂದು ನಿದರ್ಶನ. ಗ್ರಾ.ಪಂ. ಅನುದಾನದಲ್ಲಿ ಕೈಗೊಂಡ ಚರಂಡಿ ಕಾಮಗಾರಿಯೊಂದು ಪೂರ್ಣಗೊಂಡ 2 ತಿಂಗಳೊಳಗೆ ದುಸ್ಥಿತಿಗೆ ತಲಪಿದ್ದು, ಗುತ್ತಿಗೆದಾರನ ಕಳಪೆ ಕರಾಮತ್ತು ಬಯಲುಗೊಂಡಿದೆ.

ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ನಿಧಿಯಡಿ ಪರಿಶಿಷ್ಟ ಜಾತಿ-ಪಂಗಡ ಮೀಸಲಾತಿ ಅನುದಾನದಡಿ ರೂ. 1 ಲಕ್ಷ ವೆಚ್ಚದಲ್ಲಿ ಕಾನ್ವೆಂಟ್ ಬಾಣೆಯಲ್ಲಿ ಕೈಗೊಂಡ ಚರಂಡಿ ಕಾಮಗಾರಿ ಈಗಾಗಲೇ ಕಿತ್ತು ಬಂದಿದೆ. ಚರಂಡಿಯ ಬೆಡ್ಡಿಂಗ್ ಪ್ರಥಮ ಮಳೆಗೆ ಕೊಚ್ಚಿ ಹೋಗಿದ್ದು, ರಾಡ್‍ಗಳು ಮೇಲೆದ್ದು ಬಂದ ಹಿನ್ನೆಲೆ ತ್ಯಾಜ್ಯ ಶೇಖರಣೆಯಾಗುತ್ತಿದೆ. ಗ್ರಾಮದ ಗಿರಿಜ ಎಂಬವರ ಮನೆ ಮುಂಭಾಗ ರೂ. 1ಲಕ್ಷ ವೆಚ್ಚದಲ್ಲಿ 30 ಮೀಟರ್ ಉದ್ದದ ಚರಂಡಿ ನಿರ್ಮಿಸಬೇಕಿದ್ದು, ಗುತ್ತಿಗೆದಾರ ಇದರಲ್ಲೂ ನಾಲ್ಕೈದು ಮೀಟರ್ ಉದ್ದ ಕಡಿತಗೊಳಿಸಿದ್ದಾರೆ ಎನ್ನಲಾಗಿದ್ದು, ಅತ್ಯಂತ ಕಳಪೆ ಕಾಮಗಾರಿ ಮಾಡಿ ಸರ್ಕಾರದ ಹಣ ಪೋಲು ಮಾಡಿದ್ದಾರೆ ಎಂದು ಆರೋಪಿಸಿ, ಕಾನ್ವೆಂಟ್ ಬಾಣೆಯ ನಿವಾಸಿಯೋರ್ವರು ಗುತ್ತಿಗೆದಾರ ಕೃಷ್ಣ ಸೇರಿದಂತೆ ಕಾಮಗಾರಿಯ ಮೇಲ್ವಿಚಾರಣೆ ವಹಿಸಿದ್ದ ಅಣ್ಣಯ್ಯ ಅವರುಗಳ ವಿರುದ್ಧ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ. ಚರಂಡಿ ಕಾಮಗಾರಿಯ ತಳಭಾಗವು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಾಮಗಾರಿಗೆ ನಿಗದಿ ಪಡಿಸಿರುವ ಕಬ್ಬಿಣದ ರಾಡ್‍ಗಳನ್ನು ಅಳವಡಿಸಿಲ್ಲ. ಇದರೊಂದಿಗೆ ಎಸ್ಟಿಮೇಟ್‍ನಂತೆ ಕಾಮಗಾರಿ ನಡೆದಿಲ್ಲ. ಸಿಮೆಂಟ್, ಮರಳು ಮತ್ತು ಜಲ್ಲಿಯ ಮಿಶ್ರಣ ಪ್ರಮಾಣ ಇಲಾಖಾ ವತಿಯಿಂದ ನೀಡಿರುವ ಅಂದಾಜು ಪಟ್ಟಿಯಂತೆ ಇಲ್ಲ ಎಂದು ದೂರುದಾರರು ತಿಳಿಸಿದ್ದಾರೆ.

ಸರ್ಕಾರದ ಹಣ ವೃಥಾ ಪೋಲು ಮಾಡಿರುವದು. ಕಳಪೆ ಕಾಮಗಾರಿ ನಿರ್ವಹಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾಮಗಾರಿಯ ಅನುದಾನವನ್ನು ತಡೆಹಿಡಿಯಬೇಕು. ಹಳೆಯ ಚರಂಡಿಯಲ್ಲಿದ್ದ ಕಲ್ಲುಗಳನ್ನು ಪಂಚಾಯಿತಿಯ ವಶಕ್ಕೆ ಒಪ್ಪಿಸದೇ ದುರುಪಯೋಗ ಪಡಿಸಿಕೊಂಡಿರುವ ಅನುಮಾನವಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.