ಸೋಮವಾರಪೇಟೆ,ಡಿ.18: ಇಲ್ಲಿನ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಶಾಸಕರ ಅನುದಾನದಡಿ ನಗರದ ಜೇಸೀ ವೇದಿಕೆ ಸಮೀಪ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಭಾವಚಿತ್ರಗಳ ಗಲಾಟೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.

ಮೊದಲಿಗೆ ಘಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳ ಭಾವಚಿತ್ರವನ್ನು ಅಳವಡಿಸಲಾಗಿತ್ತು. ರಾಜ್ಯ ಸರ್ಕಾರದ ಅನುದಾನವಾದ್ದರಿಂದ ಮುಖ್ಯಮಂತ್ರಿಗಳ ಭಾವಚಿತ್ರವನ್ನೂ ಅಳವಡಿಸಬೇಕೆಂದು ಪ.ಪಂ. ಕಾಂಗ್ರೆಸ್ ಸದಸ್ಯರುಗಳಾದ ಕೆ.ಎ.ಆದಂ ಹಾಗೂ ಶೀಲಾ ಡಿಸೋಜ ಅವರುಗಳು ಆಗ್ರಹಿಸಿ, ರಾಜ್ಯ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ನೀಡಿದ್ದರು.

ಇದಾದ ಕೆಲ ದಿನಗಳ ನಂತರ ಕೇಂದ್ರದಲ್ಲಿ ಮುಖ್ಯಮಂತ್ರಿಯ ಭಾವಚಿತ್ರ ರಾರಾಜಿಸಿತು. ಒಂದೆರಡು ದಿನದಲ್ಲೇ ಇದು ಮಾಯವಾಯಿತು. ಹೀಗೆ ಒಂದೇ ವಾರದಲ್ಲಿ ನಾಲ್ಕು ಭಾವಚಿತ್ರಗಳನ್ನು ಅಳವಡಿಸಿದರೂ, ಇದನ್ನು ಸಹಿಸದವರು ಕಿತ್ತೆಸೆಯುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಅಳವಡಿಸಿದ್ದ ಭಾವಚಿತ್ರ ಮಾತ್ರ ಹಲವು ದಿನಗಳವರೆಗೂ ಕೇಂದ್ರದಲ್ಲಿ ರಾರಾಜಿಸುತ್ತಿತ್ತು. ಇದನ್ನೂ ಸಹ ಕಿಡಿಗೇಡಿಗಳು ಇದೀಗ ಕಿತ್ತೆಸೆದಿದ್ದಾರೆ.

ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾವಚಿತ್ರ ವಿಷಯದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಕಾಂಗ್ರೆಸ್ ಮುಖಂಡರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಿದ್ದರಾಮಯ್ಯ ಅವರ ಭಾವಚಿತ್ರ ಅಳವಡಿಸುತ್ತಿದ್ದರೆ, ರಾತ್ರಿ ವೇಳೆ ಅದನ್ನು ಯಾರೋ ಕಿತ್ತೆಸೆಯುತ್ತಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಜಾರಿಯಾಗುತ್ತಿರುವ ಯೋಜನೆಗಳ ಪ್ರಚಾರ ಫಲಕದಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಇದ್ದುದಕ್ಕೆ ಆಕ್ಷೇಪಿಸಿದ ಬಿಜೆಪಿ ಕಾರ್ಯಕರ್ತರು, ಅದೇ ಫಲಕಗಳ ಮೇಲೆ ನರೇಂದ್ರ ಮೋದಿ ಅವರ ಭಾವಚಿತ್ರ ಅಂಟಿಸಿದ್ದರು. ಇದಾದ ನಂತರ ಭಾವಚಿತ್ರ ಪ್ರಹಸನ ಅಂತ್ಯವಾಯಿತು ಎನ್ನುವಾಗಲೇ ಇದೀಗ ಮತ್ತೊಮ್ಮೆ ಮುಖ್ಯಮಂತ್ರಿಯ ಭಾವಚಿತ್ರ ನಾಪತ್ತೆಯಾಗಿದೆ.