ಸೋಮವಾರಪೇಟೆ,ನ.2: ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಕೊಡಗು ಜಿಲ್ಲೆಗೆ ತಲಾ 50 ಕೋಟಿಯಂತೆ 150 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಯಾಗಿದೆ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ರುವ ಬಿಜೆಪಿ, ಈ ಬಗ್ಗೆ ಕಾಂಗ್ರೆಸ್ ಪ್ರಮುಖರು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದೆ.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಪಕ್ಷದ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್, ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಶೇಷ ಪ್ಯಾಕೇಜ್‍ನಲ್ಲಿ ಜಿಲ್ಲೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ.ಗಳಲ್ಲಿ 16ಕೋಟಿ ರೂ.ಗಳು ಮಾತ್ರ ಬಿಡುಗಡೆಯಾಗಿದೆ. ಆದರೆ ಕಾಂಗ್ರೆಸ್ ಪ್ರಮುಖರು ಸಿದ್ದರಾಮಯ್ಯ ಅವರ ಘೋಷಣೆಯನ್ನೇ ಆಧಾರವಾಗಿಟ್ಟು ಕೊಂಡು ಅನುದಾನ ಬಂದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ 1800 ರೂ.ಗಳು ಬಿಡುಗಡೆಯಾಗಿದೆ. ಈ ಬಗ್ಗೆ ಅಪಸ್ವರ ಎತ್ತಿದ ಮಾಜಿ ಸಚಿವ ಜೀವಿಜಯ ಅವರ ಆಗ್ರಹದಂತೆ ಶ್ವೇತಪತ್ರವನ್ನೂ ಹೊರಡಿಸಲಾಗಿದೆ. ಮಾಧ್ಯಮದಲ್ಲಿ ಈ ಬಗ್ಗೆ ವರದಿಗಳು ಪ್ರಕಟಗೊಂಡಿವೆ. ಲೋಕೇಶ್ ಅವರು ಪತ್ರಿಕೆಗಳನ್ನು ಓದಿ ತಿಳಿದುಕೊಂಡಿಲ್ಲದಿರುವದು ವಿಪರ್ಯಾಸ ಎಂದು ಕುಟುಕಿದರು. ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಬಿಡುಗಡೆಯಾಗಿರುವ ವಿಶೇಷ ಅನುದಾನದ ಬಗ್ಗೆ ಕಾಂಗ್ರೆಸ್ ಶ್ವೇತಪತ್ರ ಹೊರಡಿಸಲಿ. ಆಗ ಸತ್ಯಾಸತ್ಯತೆ ಹೊರಬರಲಿದೆ ಎಂದು ಸವಾಲು ಹಾಕಿದರು.

ಬ್ಲಾಕ್ ಕಾಂಗ್ರೆಸ್‍ನ ಮುಖಂಡರೇ ಬೇನಾಮಿ ಹೆಸರಿನಲ್ಲಿ 35 ಲಕ್ಷ ಅನುದಾನದ ಗುತ್ತಿಗೆ ಪಡೆದಿದ್ದರು. ಆದರೂ ಬಿಜೆಪಿ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹಾಗಾದರೆ ಆ 35 ಲಕ್ಷ ಎಲ್ಲಿಂದ ಬಂತು? ಬಿಜೆಪಿ ಅವಧಿಯಲ್ಲಿ ರಸ್ತೆ ನಿರ್ಮಾಣವಾಗಿಲ್ಲ ಎಂಬ ಹೇಳಿಕೆಯನ್ನು ಲೋಕೇಶ್ ಅವರು ನೀಡಿದ್ದು, ರಸ್ತೆಗೆ ಬಿಡುಗಡೆ ಯಾದ 35 ಲಕ್ಷ ಎಲ್ಲಿ ಹೋಯಿತು? ಎಂದು ಅಭಿಮನ್ಯು ಕುಮಾರ್ ಪ್ರಶ್ನಿಸಿದರು.

ಸೋಮವಾರಪೇಟೆ ತಾಲೂಕಿನಲ್ಲಿ 54 ಗ್ರಾ.ಪಂ.ಗಳು ಕಾಂಗ್ರೆಸ್ ಕೈಯಲ್ಲಿವೆ ಎಂದು ಬ್ಲಾಕ್ ಕಾಂಗ್ರೆಸ್ ನೀಡಿರುವ ಹೇಳಿಕೆ ಹಾಸ್ಯಾಸ್ಪದ. 54 ಪಂಚಾಯಿತಿ ಗಳು ಕಾಂಗ್ರೆಸ್ ಕೈಯಲ್ಲಿದ್ದಿದ್ದರೆ ಕಳೆದ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದು ಯಾಕೆ? ಎಂದು ಪ್ರಶ್ನಿಸಿದರು. ಕೊಡಗಿಗೆ ಕಾಂಗ್ರೆಸ್ ಸರ್ಕಾರ ಯಾವದೇ ಅನುದಾನ ನೀಡುತ್ತಿಲ್ಲ. ಕಾಂಗ್ರೆಸ್ ಮುಕ್ತ ಕೊಡಗು ಆಗುತ್ತಿರುವದನ್ನು ಅರಿತು ವೀಣಾ ಅಚ್ಚಯ್ಯ ಅವರನ್ನು ಹಿಂಬಾಗಿಲಿನಿಂದ ಎಂಎಲ್‍ಸಿ ಮಾಡಲಾಗಿದೆ ಎಂದು ಛೇಡಿಸಿದರು. ಬಿಜೆಪಿ ಸರ್ಕಾರವಿದ್ದಾಗ ಅಪ್ಪಚ್ಚು ರಂಜನ್ ಅವರು ತಾಲೂಕಿನಲ್ಲಿ 23 ಸಾವಿರ ಮಂದಿಗೆ ಹಕ್ಕುಪತ್ರ ನೀಡಿದ್ದಾರೆ. ಈಗಿನ ಅವಧಿಯಲ್ಲಿ 3 ಸಾವಿರ ಹಕ್ಕುಪತ್ರ ವಿತರಿಸಿದ್ದು, ಇದರಲ್ಲಿ ಒಂದು ಸಾವಿರ ಹಕ್ಕುಪತ್ರವನ್ನು ಕಾಂಗ್ರೆಸ್ ಸರ್ಕಾರ ವಜಾ ಮಾಡಿದೆ. ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಸರ್ಕಾರದ ಇಂತಹ ಕ್ರಮವನ್ನು ತಡೆಯಬೇಕಿತ್ತು ಎಂದು ಅಭಿಮನ್ಯುಕುಮಾರ್ ಅಭಿಪ್ರಾಯಿಸಿ ದರು.ಜಿಲ್ಲೆಯಲ್ಲಿ ನೂತನ ಜಿಲ್ಲಾಧಿಕಾರಿಗಳ ಭವನ, ಸ್ವಿಮ್ಮಿಂಗ್‍ಪೂಲ್, ಸೈನಿಕ ಶಾಲೆ, ಸ್ನಾತಕ್ಕೋತ್ತರ ವಿಶ್ವವಿದ್ಯಾಲಯ, 8ಕ್ಕೂ ಅಧಿಕ ವಸತಿ ಶಾಲೆ, ಹಾರಂಗಿ ಉದ್ಯಾನವನ, ಕನ್ನಡ ಭವನ, ಗ್ರಾಮೀಣ ರಸ್ತೆ ದುರಸ್ತಿ, ಆಯುಷ್ ಆಸ್ಪತ್ರೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅವಧಿಯಲ್ಲಿ ನಡೆದಿದೆ. ಕಾಂಗ್ರೆಸ್ ಬಂದ ಮೇಲೆ ಅಭಿವೃದ್ಧಿ ನಿಂತ ನೀರಾಗಿದೆ ಎಂದು ದೂರಿದರು.

ಜಿಲ್ಲೆಯ ಮತದಾರರು ಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಕೆ.ಎಂ.ಲೋಕೇಶ್ ಅನೇಕ ವರ್ಷಗಳಿಂದ ಹೇಳುತ್ತಿದ್ದಾರೆ. ಮೊನ್ನೆಯೂ ಹೇಳಿದ್ದಾರೆ. ಆದರೆ ಕಳೆದ 4 ಬಾರಿ ಬಿಜೆಪಿ ಶಾಸಕರನ್ನು ಜಿಲ್ಲೆಯ ಮತದಾರರು ಗೆಲ್ಲಿಸುತ್ತ ಕಾಂಗ್ರಸ್‍ಗೆ ತಕ್ಕ ಬುದ್ದಿ ಕಲಿಸುತ್ತಿದ್ದಾರೆ. ಮುಂದೆಯೂ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಮನು ಕುಮಾರ್ ರೈ, ನಗರ ಯುವ ಮೋರ್ಚಾ ಅಧ್ಯಕ್ಷ ಶರತ್‍ಚಂದ್ರ, ಶಾಂತಳ್ಳಿ ಗ್ರಾ.ಪಂ. ಸದಸ್ಯ ಜ್ಞಾನೇಶ್ ಅವರುಗಳು ಉಪಸ್ಥಿತರಿದ್ದರು.