ಸೋಮವಾರಪೇಟೆ, ಜ. 19: ದಕ್ಷಿಣ ಕರ್ನಾಟಕದಲ್ಲಿಯೇ ವಿಶಿಷ್ಟ ವಿನ್ಯಾಸ, ಕೊಡಗಿನ ಮಟ್ಟಿಗೆ ಕ್ರೈಸ್ತ ಬಾಂಧವರ ಬೃಹತ್ ಆರಾಧನಾಲಯ ಸೋಮವಾರಪೇಟೆಯಲ್ಲಿ ನಿರ್ಮಾಣ ಗೊಂಡಿದ್ದು, 1.50 ಕೋಟಿ ವೆಚ್ಚದಲ್ಲಿ ಜಯವೀರಮಾತೆ ದೇವಾಲಯ ತಲೆ ಎತ್ತಿದೆ. ಶೇ 95ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಇದೇ ತಿಂಗಳ ತಾ. 25ರಂದು ನೂತನ ಚರ್ಚ್ ಉದ್ಘಾಟನೆಗೊಳ್ಳುವ ಮೂಲಕ ಪ್ರಾರ್ಥನೆಗೆ ಅವಕಾಶ ಲಭಿಸಲಿದೆ ಎಂದು ಧರ್ಮಗುರುಗಳು ಮಾಹಿತಿ ನೀಡಿದ್ದಾರೆ.

ಇಲ್ಲಿನ ಸಂತ ಜೋಸೆಫರ ಶಾಲೆಯ ಆವರಣದಲ್ಲಿರುವ ಜಯವೀರಮಾತೆ ದೇವಾಲಯಕ್ಕೆ 50 ವರ್ಷಗಳು ತುಂಬಿದ್ದು, ಈ ಹಿನ್ನೆಲೆ ನೂತನ ದೇವಾಲಯ ನಿರ್ಮಿಸಲು ಆಡಳಿತ ಮಂಡಳಿ, ಕ್ರೈಸ್ತ ಬಾಂಧವರು ತೀರ್ಮಾನಿಸಿದ ಮೇರೆ ಸಮಾಜದ ಎಲ್ಲಾ ವರ್ಗ, ಧರ್ಮದವರ ಸಹಕಾರ ಲಭಿಸಿದೆ ಎಂದು ಧರ್ಮಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1966ರ ಡಿಸೆಂಬರ್ 4 ರಂದು ವ್ಯಾಟಿಕನ್ ಸಿಟಿಯಿಂದ ಆಗಮಿಸಿದ ಪೋಪ್ ಪ್ರತಿನಿಧಿ ಜೇಮ್ಸ್ ರಾಬರ್ಟ್ ನಾಕ್ಸ್ ಅವರು ಕಳೆದ 50 ವರ್ಷಗಳ ಹಿಂದೆ ಈಗಿರುವ ಜಯವೀರಮಾತೆ ದೇವಾಲಯವನ್ನು ಉದ್ಘಾಟಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಸೋಮವಾರಪೇಟೆ ವ್ಯಾಪ್ತಿಯ ಕ್ರಿಶ್ಚಿಯನ್ ಬಾಂಧವರಿಗೆ ಇದೇ ಪ್ರಧಾನ ದೇವಾಲಯವಾಗಿದ್ದು, ಪ್ರಾರ್ಥನೆ, ಹಬ್ಬಾಚರಣೆಗಳು ನಡೆದುಕೊಂಡು ಬಂದಿವೆ.

ಈ ಚರ್ಚ್ ಬದಲಿಗೆ ಇದೀಗ ನೂತನ ಚರ್ಚ್ ನಿರ್ಮಾಣ ಗೊಂಡಿದ್ದು, ರೂ. 1.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗಿ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣ ಗೊಂಡಿದೆ. ಕೇರಳದ ಎರ್ನಾಕುಲಂನ ಗುತ್ತಿಗೆದಾರ ಕ್ಷೇವಿಯರ್ ಅವರು ದೇವಾಲಯವನ್ನು ಸಂಸ್ಕøತಿಯ ಪ್ರತೀಕದಂತೆ ನಿರ್ಮಿಸಿದ್ದು, ಧರ್ಮಗುರುಗಳಾದ ರಾಯಪ್ಪ, ವಿನ್ಸೆಂಟ್ ಮೊಂತೆರೋ ಸೇರಿದಂತೆ ಸಮಿತಿ ಪದಾಧಿಕಾರಿಗಳು ಪ್ರತಿ ಹಂತದಲ್ಲೂ ಕಾಮಗಾರಿಯ ಮೇಲ್ವಿಚಾರಣೆ ನಡೆಸಿದ್ದಾರೆ.

ಫ್ರಾನ್ಸ್ ಮೂಲದ ಗೋತಿಕ್ ಶೈಲಿಯಲ್ಲಿ (12ನೇ ಶತಮಾನದ ಶೈಲಿ) ಈ ದೇವಾಲಯ ನಿರ್ಮಾಣ ಗೊಂಡಿದ್ದು, ಕೊಡಗಿನ ಮಟ್ಟಿಗೆ ಬೃಹತ್ ದೇವಾಲಯ ಎಂಬ ಕೀರ್ತಿಗೆ ಭಾಜನವಾಗಲಿದೆ. ಒಳಭಾಗದಲ್ಲಿ ಸುಮಾರು 1200 ಮಂದಿ ಕುಳಿತುಕೊಳ್ಳಬಹುದಾದ ವಿಶಾಲ ಸಭಾಂಗಣ, ಪಾಯಿಂಟೆಡ್ ಆರ್ಚ್, ಕಲರ್ ವಿಂಡೋಸ್, ಇಚ್ಚಿಂಗ್ ಗ್ಲಾಸ್, ಜಪ ಸರದ ರಹಸ್ಯ ತಿಳಿಸುವ 16 ಕಿಟಕಿ, ರೋಸ್ ವಿಂಡೋ, ಏಳೂವರೆ ಅಡಿ ಎತ್ತರದ ಶಿಲುಬೆ, 8 ಅಡಿ ಎತ್ತರದ ಏಸು ಹಾಗೂ ಮಾತೆ ಮರಿಯಮ್ಮ ಅವರ ಪ್ರತಿಮೆಯನ್ನು ಈ ದೇವಾಲಯ ಒಳಗೊಂಡಿದೆ.

100 ಅಡಿ ಉದ್ದ ಹಾಗೂ 60 ಅಡಿ ಅಗಲದ ಬೃಹತ್ ದೇವಾಲಯದ ಒಳಭಾಗದಲ್ಲಿ 45/15 ವಿಸ್ತೀರ್ಣದ ಗರ್ಭಗುಡಿ, ಪ್ರಾರ್ಥನೆಗೆ ಸಿದ್ದವಾಗಲು ಧರ್ಮಗುರು ಗಳ ಕೊಠಡಿ ಒಳಗೊಂಡಿದ್ದು, ಒಟ್ಟಾರೆ ದೇವಾಲಯದ ಎತ್ತರ 82 ಅಡಿ ಇದೆ. ಬಾಗಿಲು, ಕಿಟಕಿ, ಮೇಲ್ಛಾವಣಿ ಎಲ್ಲವೂ ಗೋತಿಕ್ ಶೈಲಿಯಲ್ಲಿಯೇ ನಿರ್ಮಾಣವಾಗಿದೆ. ಚರ್ಚ್‍ಗೆ ತೆರಳಲು ಪಯೋನಿ ಯರ್ಸ್ ಕ್ಲಬ್‍ನ ಮುಂಭಾಗದಿಂದ ನೂತನ ರಸ್ತೆ ನಿರ್ಮಿಸಲಾಗಿದ್ದು, ದೇವಾಲಯಕ್ಕೆ ತೆರಳುವ ಎರಡೂ ಮಾರ್ಗ ಮಧ್ಯೆ ಶಿಲುಬೆಯ ಹಾದಿಯನ್ನು ತಿಳಿಸುವ 14 ಚಿತ್ರಣಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ ನೂತನ ದೇವಾಲಯ ಕೆಂಪು ಮತ್ತು ಬಿಳಿ ಬಣ್ಣಗಳಿಂದ ಮಾತ್ರ ಕಂಗೊಳಿಸುತ್ತಿದೆ.

ಜಯವೀರಮಾತೆ ದೇವಾಲಯ ನಿರ್ಮಾಣಕ್ಕೆ ಹಲವಷ್ಟು ದಾನಿಗಳು, ಸಮಾಜ ಬಾಂಧವರು, ಭಕ್ತಾದಿಗಳು, ಎಲ್ಲಾ ಧರ್ಮದ ಜನರು ಧನ ಸಹಾಯ ನೀಡಿದ್ದಾರೆ. ಕೆಲವರು ಕಾಮಗಾರಿಗೆ ಬೇಕಾದ ಪರಿಕರಗಳನ್ನು ಉಚಿತವಾಗಿ ಒದಗಿಸಿದ್ದಾರೆ ಎಂದು ಫಾ. ರಾಯಪ್ಪ ತಿಳಿಸಿದ್ದಾರೆ.

ದಕ್ಷಿಣ ಕರ್ನಾಟಕದ ಮಟ್ಟಿಗೆ ವಿಶಿಷ್ಟವಾಗಿ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಧಾರ್ಮಿಕ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಡಿಸುವ ಉದ್ದೇಶವನ್ನೂ ಹೊಂದಿದ್ದು ಪ್ರವಾಸೋದ್ಯಮದ ಬೆಳವಣಿಗೆಗೆ ತೊಡಗಿಸಿಕೊಳ್ಳುವ ಬಗ್ಗೆ ಚಿಂತನೆ ಹರಿದಿದೆ. ದೇವಾಲಯ ನಿರ್ಮಾಣಕ್ಕೆ ಜಾತಿ,ಮತ,ಪಂಗಡ, ಧರ್ಮದ ಭೇದವಿಲ್ಲದೆ ಎಲ್ಲರೂ ಕೈಜೋಡಿಸಿದ್ದಾರೆ ಎಂದು ಮತ್ತೋರ್ವ ಧರ್ಮಗುರು ವಿನ್ಸೆಂಟ್ ಮೊಂತೆರೋ ‘ಶಕ್ತಿ’ಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- ವಿಜಯ್ ಹಾನಗಲ್