ಕುಶಾಲನಗರ, ನ 1: 12ನೇ ಶತಮಾನವನ್ನು ಬಸವಯುಗ ಎಂದು ಕರೆಯಲಾಗುತ್ತದೆ. ಅಂದಿನ ದಿನಗಳಲ್ಲೇ ಜಾತ್ಯತೀತ ಸಮಾಜ ನಿರ್ಮಾಣದ ಕನಸು ಹೊತ್ತಿದ್ದ ಬಸವಣ್ಣ ತಮ್ಮ ಅನುಭವ ಮಂಟಪ ದಲ್ಲಿ ಎಲ್ಲಾ ಜಾತಿಯವರಿಗೂ ಅವಕಾಶ ಮಾಡಿಕೊಡುವ ಮೂಲಕ ಜಗಜ್ಯೋತಿ ಅನ್ನಿಸಿಕೊಂಡರು ಎಂದು ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಅಭಿಪ್ರಾಯಪಟ್ಟರು. ಸಮೀಪದ ಕೂಡಿಗೆಯಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಇತ್ತೀಚೆಗೆ ಶರಣ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ವಚನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ತಂದೆ ಬುದ್ಧಿವಾದ ಹೇಳುವಷ್ಟೇ ಸುಲಭ ಭಾಷೆಯಲ್ಲಿ ರಚಿತವಾಗಿರುವ ವಚನಗಳು ವೇದ, ಪುರಾಣಗಳಲ್ಲಿ ಹೇಳಿರುವದನ್ನು ಜನಸಾಮಾನ್ಯರಿಗೆ ಸರಳವಾಗಿ ತಲಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿವೆ. ವಚನಕಾರರು ಬಳಕೆಯಲ್ಲಿದ್ದ ಭಾಷೆಯಲ್ಲೇ ಜನರಿಗೆ ಬೇಕಾದ ವಿಷಯಗಳನ್ನು ಮುಟ್ಟಿಸಿ ಜನಮನ್ನಣೆ ಗಳಿಸಿದರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ವೈಜ್ಞಾನಿಕ ಆಲೋಚನೆ, ತರ್ಕಬದ್ಧ ಚಿಂತನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿದ ಕೀರ್ತಿ ವಚನಗಳಿಗೆ ಸೇರುತ್ತದೆ. ಇಂದಿನ ದಿನಮಾನಕ್ಕೆ ಬಸವ ತತ್ವ ಹೆಚ್ಚು ಅಗತ್ಯ ಅನ್ನಿಸುತ್ತಿದ್ದು, ಮತ್ತೊಬ್ಬ ಬಸವಣ್ಣನ ಅವತಾರ ಆಗಬೇಕಿದೆ ಎಂದರು.

ಸಂಸ್ಥೆಯ ಪ್ರಾಂಶುಪಾಲ ಕೆ. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ಮಾತನಾಡಿದರು.