ಮಡಿಕೇರಿ, ಅ.28 : ನವೆಂಬರ್ 1 ರಂದು ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ಅಂದು ದೆಹಲಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ದೆಹಲಿಯ ಪಾರ್ಲಿಮೆಂಟ್ ಭವನದ ಮುಂದಿರುವ ಜಂತರ್ ಮಂತರ್‍ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ ರಾಜ್ಯವಾಗಿದ್ದ ಕೊಡಗನ್ನು ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಳಿಸಿದ ನಂತರ ಕೊಡವರ ಹಕ್ಕುಗಳಿಗೆ ಚ್ಯುತಿ ಬಂದಿದೆಯೆಂದು ಆರೋಪಿಸಿದರು. 20ನೇ ವರ್ಷದ ದೆಹಲಿ ಚಲೋ ಚಳುವಳಿಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಕೊಡವ ಮತ್ತು ಕೊಡವತಿಯರು ಪಾಲ್ಗೊಳ್ಳಲಿದ್ದಾರೆ.

ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶವೆಂದು ಕೊಡಗನ್ನು ಘೋಷಣೆ ಮಾಡಬೇಕು, ಕೊಡವರನ್ನು ಸಂವಿಧಾನದ 340, 342ನೇ ವಿಧಿಯಂತೆ ಷೆಡ್ಯೂಲ್ ಪಟ್ಟಿಗೆ ಸೇರಿಸುವದರೊಂದಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕ ಸ್ಥಾನಮಾನ ನೀಡಬೇಕು, ಕೊಡವ ಭಾಷೆಯನ್ನು 8ನೇ ಷೆಡ್ಯೂಲ್‍ಗೆ ಸೇರಿಸಬೇಕು, 371ನೇ ವಿಧಿ ಪ್ರಕಾರ ಇನ್ನರ್ ಲೈನ್ ಪರ್ಮಿಟ್ ಮೂಲಕ ಭದ್ರತೆ ಒದಗಿಸಬೇಕು, ಕೊಡವರ ಸಾಂಪ್ರದಾಯಿಕ ಭೂಮಿಯನ್ನು ಪರರ ಸ್ವತ್ತಾಗದಂತೆ ಸಂರಕ್ಷಿಸಬೇಕು, ಕೊಡವರಿಗೆ ಮತ್ತು ಜಮ್ಮಾ ಹಿಡುವಳಿದಾರರಿಗೆ ಬಂದೂಕು ವಿನಾಯಿತಿ ಹಕ್ಕನ್ನು ಅಭಾದಿತವಾಗಿ ಮುಂದುವರಿಸಬೇಕು, ಟಿಪ್ಪುನಿಂದ ಕೊಡವರ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿರುವ ದೇವಟ್ ಪರಂಬು ಪ್ರದೇಶದಲ್ಲಿ ಸ್ಮಾರಕ ನಿರ್ಮಿಸಬೇಕು, ಕೊಡವ ಜನಾಂಗಕ್ಕೆ ಯಹೂದಿ ಪಾರ್ಸಿ, ಸಿಂಧಿ, ಏಜಿದಿ, ಕುರ್ದಿ , ಬಲೂಚಿ, ಪಸ್ತೂನ್ ಮತ್ತು ಕಾಶ್ಮೀರಿ ಪಂಡಿತರಂತೆ ಜಾಗತಿಕ ಮಾನ್ಯತೆ ದೊರೆಯಬೇಕು, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಅಪಾಯ ತಂದೊಡ್ಡುವ ಶಕ್ತಿಗಳು ಕೊಡಗನ್ನು ಅಡಗು ತಾಣವಾಗಿ ಪರಿವರ್ತಿಸಿಕೊಳ್ಳುವ ಸಾಧ್ಯತೆಗಳಿದ್ದು, ಎನ್‍ಐಎ ಮತ್ತು ರಾ ಏಜೆನ್ಸಿಯನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂಬ ಬೇಡಿಕೆ ಸೇರಿದಂತೆ 11 ಹಕ್ಕೊತ್ತಾಯಗಳಿಗೆ ತಕ್ಷಣ ಕೇಂದ್ರ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿ ನವೆಂಬರ್ 1 ರಂದು ಧರಣಿ ಸತ್ಯಾಗ್ರಹ ನಡೆಸುತ್ತಿರುವದಾಗಿ ನಾಚಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ಕಲಿಯಂಡ ಪ್ರಕಾಶ್, ಮೊಕೊಂಡ ದಿಲೀಪ್, ಚಂಬಂಡ ಜನತ್, ಕೂಪದಿರ ಸಾಬು ಹಾಗೂ ಅರೆಯಡ ಗಿರೀಶ್ ಉಪಸ್ಥಿತರಿದ್ದರು. ಗೋಷ್ಠಿಗೂ ಮೊದಲು ಎನ್.ಯು. ನಾಚಪ್ಪ ಮತ್ತು ಪ್ರಮುಖರು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.