ಸೋಮವಾರಪೇಟೆ, ಜೂ. 9: ಕಾಲಿನ ಸ್ವಾಧೀನ ಕಳೆದುಕೊಂಡಿರುವ ಪುಟ್ಟ ಬಾಲಕಿ ಮನ್ವಿತಾ(6)ಳ ಶಸ್ತ್ರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 25 ಸಾವಿರ ರೂಪಾಯಿಗಳ ಸಹಾಯ ಧನದ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಪಟ್ಟಣದ ಜನತಾ ಕಾಲೋನಿಯ ಚೆಲುವ ಹಾಗೂ ಅನಿತಾ ದಂಪತಿಗಳ ಪುತ್ರಿ ಮನ್ವಿತಾಳು ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾಳೆ. ಆಕೆಗೆ ಇದೀಗ ತಮಿಳುನಾಡಿನ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪುಟ್ಟ ಬಾಲಕಿ ಮನ್ವಿತಾಳಿಗೆ ಮೂರು ಹಂತದ ಶಸ್ತ್ರ ಚಿಕಿತ್ಸೆ ನಡೆಯಬೇಕಿದ್ದು, ಅದಕ್ಕಾಗಿ ಲಕ್ಷಾಂತರ ರೂಪಾಯಿಗಳ ಅವಶ್ಯವಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬ ಇವರದಾಗಿದ್ದು, ತನ್ನ ಮಗಳ ಚಿಕಿತ್ಸೆಗಾಗಿ ಸಹಾಯ ಹಸ್ತಕ್ಕೆ ಕೋರಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಡುಗಡೆ ಮಾಡಿದ ರೂ. 25 ಸಾವಿರ ಮೊತ್ತದ ಚೆಕ್ಕನ್ನು ಯೋಜನೆಯ ಸ್ಥಳೀಯ ಕಚೇರಿಯಲ್ಲಿ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಹಾಗೂ ಪ್ರಬಂಧಕ ರಾಜೇಶ್ ಅವರುಗಳು ಮನ್ವಿತಾಳ ಪೋಷಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಯೋಜನೆಯ ಮೇಲ್ವಿಚಾರಕ ನಾಗರಾಜ್, ಸೇವಾ ಪ್ರತಿನಿಧಿ ಎಂ.ಎ. ರುಬೀನಾ ಇದ್ದರು.