ಮಡಿಕೇರಿ, ಜು.22 : ಗಣಿತ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ತಾ.25 ರಿಂದ ಅನಿರ್ದಿಷ್ಟಾವಧಿ ಕಾಲ ತರಗತಿಯನ್ನು ಬಹಿಷ್ಕರಿಸಲು ಕರಿಕೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಸ್.ಕೆ.ವೆಂಕಪ್ಪ ಗೌಡ ಕಳೆದ 5 ವರ್ಷಗಳಿಂದ ಶಿಕ್ಷಣ ಇಲಾಖೆ ಗಣಿತ ಶಿಕ್ಷಕರನ್ನು ನೇಮಿಸದೆ ಗಡಿಗ್ರಾಮದ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಕರಿಕೆ ಗ್ರಾಮದಲ್ಲಿ 1990 ರಲ್ಲಿ ಪ್ರೌಢಶಾಲೆ ಸ್ಥಾಪನೆಗೊಂಡಿದ್ದು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಗಂಡÀದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಕೂಲಿ ಕಾರ್ಮಿಕರು, ಬಡವರು ಕೂಡ ಇದ್ದಾರೆ. ಶಾಲೆಯಲ್ಲಿ ಸುಮಾರು 116 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ಪ್ರತಿಭಾವಂತರಾಗಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರ ಹುದ್ದೆ ಖಾಲಿ ಇದ್ದು, ಕಳೆದ 2 ವರ್ಷಗಳಿಂದ ಪೋಷಕರ ಒತ್ತಾಯದ ಮೇರೆಗೆ ಪ್ರಾಥಮಿಕ ಶಾಲೆಯ ಅಧ್ಯಾಪಕ ಪ್ರವೀಣ್ ಅವರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಗಣಿತ ತರಗತಿಯನ್ನು ನಿಭಾಯಿಸಿದ್ದಾರೆ. ಪ್ರತಿಭಟನೆ ಹಾಗೂ ಮನವಿ ಪತ್ರಗಳ ಮೂಲಕ ಶಿಕ್ಷಕರ ಕೊರತೆ ಬಗ್ಗೆ ಶಿಕ್ಷಣಾಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಅಧಿಕಾರಿಗಳೇ ಈ ಸಮಸ್ಯೆ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ವೆಂಕಪ್ಪಗೌಡ ಆರೋಪಿಸಿದರು. ಪ್ರಸ್ತುತ ವರ್ಷ ಶಾಲೆ ಆರಂಭವಾಗಿ 2 ತಿಂಗಳುಗಳೇ ಕಳೆದರು ಗಣಿತ ಪಾಠ ಪ್ರಾರಂಭವಾಗಿಲ್ಲ. ಕಳೆದ 5 ವರ್ಷಗಳಿಂದ ಈ ಶಾಲೆಯ ಮುಖ್ಯ ಶಿಕ್ಷಕರಾಗಿ ನಿಯೋಜನೆಗೊಂಡಿರುವ ಗೋವಿಂದ ಗೌಡ ಅವರು ನಿರಂತರವಾಗಿ ಶಾಲೆಗೆ ಗೈರು ಹಾಜರಾಗುತ್ತಿದ್ದು, ಇಲ್ಲಿನ ಎಲ್ಲಾ ಅವ್ಯವಸ್ಥೆಗಳಿಗೂ ಮುಖ್ಯ ಶಿಕ್ಷಕರೇ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖಾಧಿಕಾರಿಗಳಿಗೆ ಹಲವು ಬಾರಿ ಈ ಬಗ್ಗೆ ದೂರು ಸಲ್ಲಿಸಿದರೂ ಯಾವದೇ ಸ್ಪಂದನೆ ದೊರೆತ್ತಿಲ್ಲ. ಇದರಿಂದ ಬೇಸತ್ತಿರುವ ವಿದ್ಯಾರ್ಥಿಗಳ ಪೋಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸುವದು ಸೂಕ್ತವೆಂದು ನಿರ್ಧರಿಸಿರುವದಾಗಿ ತಿಳಿಸಿದರು. ಮುಖ್ಯ ಶಿಕ್ಷಕರನ್ನು ತಕ್ಷಣ ವರ್ಗಾವಣೆ ಮಾಡಬೇಕು ಮತ್ತು ಗಣಿತ ಶಿಕ್ಷಕರನ್ನು ನೇಮಿಸಬೇಕೆನ್ನುವ ಒತ್ತಾಯವಿದ್ದು, ಈ ಎರಡು ಬೇಡಿಕೆಗಳು ಈಡೇರುವವರೆಗೆ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಲಿದ್ದಾರೆ ಎಂದು ವೆಂಕಪ್ಪ ಗೌಡ ತಿಳಿಸಿದರು. ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲು ಮತ್ತು ಈ ಬೆಳವಣಿಗೆಗೆ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಆರೋಪಿಸಿದ ವೆಂಕಪ್ಪ ಗೌಡ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಕೆ.ಆರ್.ಧನಂಜಯ, ಥೋಮಸ್ ಹಾಗೂ ಕೆ.ಟಿ.ರಘುರಾಮ್ ಉಪಸ್ಥಿತರಿದ್ದರು.