ಸೋಮವಾರಪೇಟೆ,ಡಿ.11: ಕಾಫಿ ಬೆಳೆಗಾರರು ರೂಡಿಸಿಕೊಂಡು ಬಂದಿರುವ ಕಾಫಿ ತೋಟವನ್ನು ಒತ್ತುವರಿ ಎಂಬ ಕಾರಣ ನೀಡಿ ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಮುಂದುವರೆಸಿದ್ದೇ ಆದಲ್ಲಿ ಕಾಫಿ ಬೆಳೆಗಾರರ ಸಂಘದ ವತಿಯಿಂದ ಉಗ್ರವಾದ ಪ್ರತಿಭಟನೆ ನಡೆಸಬೇಕಾದೀತು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಎಚ್ಚರಿಸಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ತಾಲೂಕಿನ ಶಿರಂಗಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟಗಳ ಬದಿಯಲ್ಲಿದ್ದ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಹಲವು ವರ್ಷಗಳಿಂದ ದೀರ್ಘಾವಧಿ ಬೆಳೆಯಾದ ಕಾಫಿ ಸೇರಿದಂತೆ ಕಾಳುಮೆಣಸು ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ.

ಕಾನೂನಿನಂತೆ ಅಕ್ರಮವಾದ ಈ ಭೂಮಿಯನ್ನು ಸಕ್ರಮ ಮಾಡಿಕೊಡಬೇಕೆಂದು ಸಂಬಂಧಿತ ನಮೂನೆಗಳಲ್ಲಿ ತಾಲೂಕು ಅಕ್ರಮ-ಸಕ್ರಮ ಸಮಿತಿಗೆ ತಹಶೀಲ್ದಾರ್ ಕಚೇರಿ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ ಹಲವು ಅರ್ಜಿಗಳು ಸಮಿತಿಯಲ್ಲಿ ಇತ್ಯರ್ಥಗೊಂಡು ಕಂದಾಯ ಇಲಾಖೆಯಿಂದ ದಾಖಲೆಯನ್ನು ಪಡೆದುಕೊಂಡು ಕೃಷಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಇನ್ನು ಕೆಲವರ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ. ಹೀಗಿದ್ದರೂ ರಾಜ್ಯ ಸರಕಾರ ಏಕಾಏಕಿ ಅವುಗಳೆಲ್ಲ ಸರಕಾರದ ಭೂಮಿ ಎಂದು ತೆರವುಗೊಳಿಸುತ್ತಿರುವದು ಖಂಡನೀಯ. ಈ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸಬೇಕು. ತಪ್ಪಿದ್ದಲ್ಲಿ ನೊಂದ ಕಾಫಿ ಬೆಳೆಗಾರರೊಂದಿಗೆ, ಉಳಿದ ಕಾಫಿ ಬೆಳೆಗಾರರನ್ನೂ ಒಗ್ಗೂಡಿಸಿ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಬಿ.ಎಂ. ಮೋಹನ್ ಬೋಪಣ್ಣ ಮಾತನಾಡಿ, ಕಾಫಿ ಬೆಳೆಗಾರರ

(ಮೊದಲ ಪುಟದಿಂದ) ಸಮಸ್ಯೆಗಳನ್ನು ಆಲಿಸುವ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಂಘದ ಸದಸ್ಯತ್ವ ನೋಂದಾವಣೆ ಕಾರ್ಯವನ್ನು ಮಾಡಿಕೊಂಡು ಸಂಘವನ್ನು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಬೆಳೆಗಾರರ ಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸಂಘದ ನಿರ್ದೇಶಕ ಬಿ.ಎಸ್. ಅನಂತರಾಮ್ ಹಾಗೂ ಉಪಾಧ್ಯಕ್ಷ ಕೆ.ಪಿ. ಬಸಪ್ಪರವರುಗಳು ಮಾತನಾಡಿ, ಕಾಫಿ ಬೆಳೆಗಾರರು ಒಂದೆಡೆ ಹವಾಮಾನ ವೈಪರೀತ್ಯದಿಂದ ಬೆಳೆಯಲ್ಲಿ ನಷ್ಟವನ್ನನುಭವಿಸುತ್ತ, ಇನ್ನೊಂದೆಡೆಯಲ್ಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಾ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಇದೀಗ ಸಂಘದ ಮೂಲಕ ಕಾರ್ಮಿಕ ಮುಖಂಡರೊಂದಿಗೆ ಸಂಧಾನ ಹಾಗೂ ಸರಕಾರದೊಂದಿಗೆ ಪರಿಹಾರಕ್ಕೆ ಮುಂದಾಗಬೇಕಾಗಿದೆ ಎಂದರು.ವೇದಿಕೆಯಲ್ಲಿ ಶಿರಂಗಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಉಡುವೇರ ಟಾಟು, ತಾಲೂಕು ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಎಸ್.ಸಿ. ಪ್ರಕಾಶ್, ಖಜಾಂಚಿ ಎನ್.ಎನ್. ರಮೇಶ್, ಪ್ರಮುಖರುಗಳಾದ ಎಸ್.ಎಂ. ಡಿಸಿಲ್ವ, ಕಾಲಿಸ್ತಾ ಡಿಸಿಲ್ವ, ಪಿ.ಸಿ. ಮಾದಪ್ಪ ಉಪಸ್ಥಿತರಿದ್ದರು. ತಾ. 13ರಂದು (ನಾಳೆ) ತಾಲೂಕು ಕೇಂದ್ರವಾದ ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ಸಂಘದ ತಾಲೂಕು ಮಟ್ಟದ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸದಸ್ಯರು ಹಾಗೂ ಆಸಕ್ತ ಕಾಫಿ ಬೆಳೆಗಾರರು ಪಾಲ್ಗೊಳ್ಳುವ ಮೂಲಕ ತಮ್ಮ ಸಲಹೆ, ಸೂಚನೆಗಳನ್ನು ನೀಡಬೇಕೆಂದು ಸಭೆಯಲ್ಲಿ ಅಧ್ಯಕ್ಷ ಮೋಹನ್ ಬೋಪಣ್ಣ ಮನವಿ ಮಾಡಿದರು.