*ಗೋಣಿಕೊಪ್ಪಲು, ಅ. 28: ಆಸ್ತಿ ವಿವಾದಕ್ಕಾಗಿ ಅಣ್ಣತಮ್ಮಂದಿರೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಪೊನ್ನಂಪೇಟೆ ಸಮೀಪದ ಹುದೂರು ಗ್ರಾಮದಲ್ಲಿ ಸಂಭವಿಸಿದೆ. ತೀವ್ರ ಗಾಯ ಗೊಂಡಿರುವ ಐವರಾದ ಉಮ್ಮರ್, ಮಮ್ಮದ್, ಇಸ್ಮಾಯಿಲ್, ಪತ್ನಿ ಆಯಿಷಾ ಹಾಗೂ ಅಬೂಬಕರ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಯಿತು.

ಗಾಯಗೊಂಡಿರುವ ಮಮ್ಮದ್ ಪತ್ನಿ ಶರೀಫ ಎಂಬವರು ಗೋಣಿಕೊಪ್ಪಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹುದೂರಿನ ಆಲಿರ ಅಬ್ದುಲ್ಲಾ ಅವರ ಮಕ್ಕಳಾದ ಇವರು ಇಂದು ಮಧ್ಯಾಹ್ನ ಮಸೀದಿಗೆ ಹೋಗಿ ನಮಾಜು ಮುಗಿಸಿಕೊಂಡು ಬಂದಿದ್ದಾರೆ. ತಂದೆ ತೀರಿಕೊಂಡಿ ದ್ದರೂ ಆಸ್ತಿ ಹಾಗೂ ಮನೆ ವಿಭಾಗ ವಾಗದ ಕಾರಣ ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.

ಆಸ್ತಿ ವಿವಾದಕ್ಕಾಗಿ ನಡೆದ ಜಗಳದಲ್ಲಿ ಪರಸ್ಪರ ಕತ್ತಿ ಹಾಗೂ ದೊಣ್ಣೆಯಿಂದ ಹೊಡೆದಾಡಿಕೊಂಡು ತಲೆ ಹಾಗೂ ಕೈಕಾಲುಗಳಿಗೆ ತೀವ್ರ ಗಾಯ ಮಾಡಿಕೊಂಡಿದ್ದಾರೆ. ಜಗಳ ಬಿಡಿಸಲು ಹೋದ ಮಹಿಳೆಯರ ಮೇಲೂ ಹಲ್ಲೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯರು ಗೋಣಿಕೊಪ್ಪಲು ಆಸ್ಪತ್ರೆಗೆ ಕರೆತಂದಿದ್ದಾರೆ. ಬಳಿಕ ತೀವ್ರವಾಗಿ ಗಾಯಗೊಂಡ ಮೂವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಯಿತು.

ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಪಿಐ ಪಿ.ಕೆ.ರಾಜು, ಸ್ಥಳೀಯ ಅಪರಾಧ ವಿಭಾಗದ ಸಬ್ ಇನ್ಸ್‍ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.