ಸಿದ್ದಾಪುರ, ಜು. 25: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕುಡಿದ ಅಮಲಿನಲ್ಲಿ ಸಂಬಂಧಿಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸಮೀಪದ ವಾಲ್ನೂರು ಗ್ರಾ.ಪಂ ವ್ಯಾಪ್ತಿಯ ಬಾಳೆಗುಂಡಿ ಹಾಡಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಜೇನುಕುರುಬರ ಎಮ್ಮೆ ರಾಮ (60) ಎಂಬಾತನನ್ನು ಆತನ ಸಂಬಂಧಿಕನಾದ ಸುರೇಶ (26) ಕುಡಿದ ಅಮಲಿನಲ್ಲಿ ಕತ್ತಿಯಿಂದ ತಲೆಗೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾತ್ರಿ ವೇಳೆ ಇಬ್ಬರೂ ಕುಡಿದ ಅಮಲಿನಲ್ಲಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಪರಸ್ಪರ ಮಾತಿನ ಚಕಮಕಿ ಏರ್ಪಟ್ಟಿದ್ದು, ಸುರೇಶ ಕತ್ತಿಯಿಂದ ರಾಮನ ತಲೆಗೆ ಕಡಿದಿದ್ದು, ಕತ್ತಿಯ ಏಟು ಮೆದುಳಿನವರೆಗೂ ತಲಪಿದೆ. ಜೇನುಕುರುಬರ ರಾಮ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆರೋಪಿ ಸುರೇಶನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ 302,323 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಬಿ.ಜಿ. ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.