ಸುಂಟಿಕೊಪ್ಪ, ಅ. 28: ವಿದ್ಯಾ ಮಂದಿರವನ್ನು ದೇಗುಲಕ್ಕೆ ಹೋಲಿಸುತ್ತಾರೆ. ಶಾಲಾ-ಕಾಲೇಜುಗಳಲ್ಲಿ ಪ್ರಶಾಂತತೆ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ ಹಾಡ ಹಗಲಿನಲ್ಲೇ ವಿದ್ಯಾಮಂದಿರದ ಮುಂದೆ ನಿರಾಶ್ರಿತರು ಬೀಡುಬಿಟ್ಟು ವಾತಾವರಣ ಕಲುಷಿತಗೊಳಿಸಿದರೆ ಅದಕ್ಕೆ ಏನೆನ್ನಬೇಕು?

ಸುಂಟಿಕೊಪ್ಪದ ಮಾರುಕಟ್ಟೆ ರಸ್ತೆಯ ಬಳಿ ನೂತನವಾಗಿ ಆರಂಭಿಸಲಾದ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿಯೇ ಹೊರ ಜಿಲ್ಲೆಯಿಂದ ಇಲ್ಲಿ ಕೂಲಿ ಕೆಲಸಕ್ಕೆ ಬಂದಿರುವ ಕಾರ್ಮಿಕರು ಬೀಡುಬಿಟ್ಟಿದ್ದು, ಅಡುಗೆ ಮಾಡಿಕೊಂಡು ರಾತ್ರಿ ವೇಳೆ ಕಾಲೇಜಿನ ವಠಾರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಪುರುಷರು, ಮಹಿಳೆಯರು, ಪುಟಾಣಿ ಮಕ್ಕಳು ಕಾಲೇಜಿನ ಆವರಣದ ಸುತ್ತು ಮುತ್ತಲು ಮಲ-ಮೂತ್ರ ವಿಸರ್ಜಿಸುತ್ತಾ ವಾತವರಣ ಕಲುಷಿತಗೊಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಅಶುಚಿತ್ವದಿಂದ ಕೂಡಿದ ವಾತಾವರಣದಲ್ಲಿ ಉಸಿರು ಬಿಗಿ ಹಿಡಿದುಕೊಂಡು ಪಾಠ ಆಲಿಸಬೇಕಾಗಿದೆ.

ಮಧ್ಯಾಹ್ನದ ಮೇಲೆ ಕಾಲೇಜಿಗೆ ಪೂರೈಕೆಯಾಗುತ್ತಿರುವ ಪಂಚಾಯಿತಿಯ ನೀರನ್ನು ಬಳಸಿ ಕಟ್ಟಿಗೆಯಿಂದ ಅಡುಗೆ ತಯಾರಿಸಿ ಊಟ ಮಾಡಿಕೊಂಡು ಹಾಯಾಗಿ ಇದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕರು, ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳದಿರುವದು ವಿಸ್ಮಯವಾಗಿದೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದ್ದು, ಇಲ್ಲಿನ ಪುಟಾಣಿ ಮಕ್ಕಳು ಅಂಗನವಾಡಿ ಸುತ್ತಮುತ್ತಲಿನ ಕಾರ್ಮಿಕರ ಹೊಲಸು ಎಬ್ಬಿಸಿದ ವಾತವರಣದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸುವಂತಾಗಿದೆ.