ಕುಶಾಲನಗರ, ಜೂ. 15: ಜೀವನದಿ ಕಾವೇರಿ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗುವದು ಎಂದು ರಾಜ್ಯ ವಿಧಾನ ಪರಿಷತ್‍ನ ನೂತನ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು.

ಜಿಲ್ಲೆಗೆ ಆಗಮಿಸಿದ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರು ಕುಶಾಲನಗರದ ಕೊಪ್ಪ ಗೇಟ್ ಬಳಿ ಅವರನ್ನು ಹೂಗುಚ್ಚ ನೀಡಿ, ಮಾಲಾರ್ಪಣೆಗೈದು ಬರಮಾಡಿ ಕೊಂಡರು.

ಈ ಸಂದರ್ಭ ಮಾತನಾಡಿದ ವೀಣಾ ಅಚ್ಚಯ್ಯ ಅವರು, ಕಾವೇರಿ ಮಾತೆಯ ಅನುಗ್ರಹದಿಂದ ತನಗೆ ಈ ಸ್ಥಾನ ಲಭಿಸಿದೆ. ಕಾವೇರಿ ನದಿ ಸಂರಕ್ಷಣೆಗೆ ಕಾಂಗ್ರೆಸ್ ಸರಕಾರದ ಮೂಲಕ ಯೋಜನೆಗಳನ್ನು ಹಮ್ಮಿ ಕೊಳ್ಳಲು ಚಿಂತನೆ ಹರಿಸಲಾಗುವದು. ತನಗೆ ಒದಗಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಕ್ಷ ಸಂಘಟನೆಯೊಂದಿಗೆ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸ ಲಾಗುವದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಉಪಾಧ್ಯಕ್ಷ ಹೆಚ್.ಕೆ. ನಟೇಶ್ ಗೌಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಪಕ್ಷದ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ, ಕೂಡಾ ಅಧ್ಯಕ್ಷ ಎಸ್.ಎನ್. ನರಸಿಂಹ ಮೂರ್ತಿ, ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ಮುತ್ತಪ್ಪ್ಪ, ಜಂಟಿ ಕಾರ್ಯದರ್ಶಿ ಮುದ್ದಪ್ಪ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಪ್ರಮುಖ ರಾದ ಬಿ.ಎಸ್. ಚಂದ್ರಶೇಖರ್, ಅಬ್ದುಲ್ ಖಾದರ್, ಆರ್.ಕೆ. ನಾಗೇಂದ್ರಬಾಬು, ಆರ್.ಕೆ. ಚಂದ್ರ ಮೊದಲಾದವರಿದ್ದರು.

ಕುಶಾಲನಗರ ಕೊಡವ ಸಮಾಜದ ವತಿಯಿಂದ ವೀಣಾ ಅಚ್ಚಯ್ಯ ಅವರಿಗೆ ಅಭಿನಂದನೆ ಸಲ್ಲಿಸಿ ಸ್ವಾಗತಿಸಲಾಯಿತು. ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಹಾಗೂ ಪದಾಧಿಕಾರಿಗಳು ಮಾಲಾರ್ಪಣೆಗೈದು ಸ್ವಾಗತಿಸಿದರು.