ಮಡಿಕೇರಿ, ಸೆ.9 : ಅರೆಭಾಷೆ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ.10 ಮತ್ತು 11ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವ ಅರೆಭಾಷೆ ಸಾಹಿತ್ಯ ಸಮಾವೇಶವನ್ನು ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅವರು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು, ಸುಳ್ಯದ ಗೌಡರ ಯುವ ಸೇವಾ ಸಂಘ ಹಾಗೂ ಸುಬ್ರಹ್ಮಣ್ಯ ಗ್ರಾಮ ಗೌಡ ಸಮಿತಿ, ಮಹಿಳಾ ಮತ್ತು ತರುಣ ಘಟಕಗಳ ಸಹಯೋಗದಲ್ಲಿ ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವ ಜನರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವದು ಕಾರ್ಯಕ್ರಮದ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಎರಡೂ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವದಲ್ಲದೆ, ಎಲ್ಲಾ ಗೋಷ್ಠಿಗಳ ದಾಖಲೀಕರಣ ಮಾಡಲಾಗುವದು ಎಂದು ತಿಳಿಸಿದರು.

ತಾ. 10 ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಟಿ.ಜಿ.ಮುಡೂರು ಅವರು ಸಮಾವೇಶವನ್ನು

(ಮೊದಲ ಪುಟದಿಂದ) ಉದ್ಘಾಟಿಸಲಿದ್ದು, ಸುಳ್ಯ ಶಾಸಕ ಎಸ್.ಅಂಗಾರ, ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಗೌಡ, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ|| ಕೆ.ವಿ.ರಾಜೇಂದ್ರ, ಮಾಸ್ ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿ ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಹೆಚ್.ಸುಶೀಲಾ, ಉಪಾಧ್ಯಕ್ಷ ಬಿ.ಎನ್.ದಿನೇಶ್, ಸುಳ್ಯ ಎಪಿಎಂಸಿ ಸದಸ್ಯ ಸತೀಶ್ ಕೂಜುಗೋಡು, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ತರುಣ ಘಟಕದ ಅಧ್ಯಕ್ಷೆ ಶ್ರೀಮತಿ ಶ್ರೀಕಾಂತ್ ಮಾವಿನಕಟ್ಟೆ ಅವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ನಡೆಯುವ ಸಾಹಿತ್ಯಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಆನಂದಗೌಡ ಪರ್ಲ ಅವರು ಅಧ್ಯಕ್ಷತೆವಹಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪೆರುವಾಜೆ ಶಿವರಾಮ ಕಾರಂತ ಪದವಿ ಕಾಲೇಜು ಪ್ರಾಂಶುಪಾಲ ಯು.ಸು. ಸುಬ್ರಾಯ ಗೌಡ ವಹಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಹಾಗೂ ಕವನಗಳನ್ನು ಮಂಡಿಸಲಿದ್ದಾರೆ ಎಂದರು.

ಅಪರಾಹ್ನ 2.30ಕ್ಕೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಡಬದ ಶ್ರೀ ಚೇತನ್ ಪುರಿಯಾ ಬಳಗದವರಿಂದ ‘ಅರೆಭಾಷೆ ಜನಾಂಗದ ಹೆಜ್ಜೆಗಳು’ ನೃತ್ಯರೂಪಕ ನಡೆಯಲಿದ್ದು, ಸಂಜೆ 4.30ಗಂಟೆಗೆ ಸ್ಥಳೀಯ ಸಂಘಸಂಸ್ಥೆಗಳ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಕೊಲ್ಯದ ಗಿರೀಶ್ ಮಾಹಿತಿ ನೀಡಿದರು.

ತಾ.11ರ ಪೂವಾಹ್ನ 10.30ಕ್ಕೆ ಅರೆಭಾಷೆ ಸಂಸ್ಕøತಿ ಕುರಿತ ವಿಚಾರಗೋಷ್ಠಿ ನಡೆಯಲಿದ್ದು, ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮರ್ಕಂಜ ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಚಂದ್ರಮತಿ ಅವರು ‘ಮಹಿಳೆ ಮತ್ತು ಸಮಾಜ’ ಜೇಸಿ ತರಬೇತುದಾರ ಶಶಿಧರ ಪಳಂಗಾಯ ಅವರು ಅರೆಭಾಷೆ ಸಾಂಸ್ಕøತಿಕ ರಂಗ-ಯುವ ಸಮುದಾಯ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕೊಡಗು ಜಿಲ್ಲಾ ಸಹಾಯಕ ನಿರ್ದೇಶಕ ಎಲ್.ಎನ್.ಕುಳ್ಳಯ್ಯ, ಕುಕ್ಕೆಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಯಲದ ಪ್ರಾಂಶುಪಾಲ ಮನಮೋಹನ ಮುಡೂರು, ಪವಿಪೂರ್ವ ಕಾಲೇಜು ಪ್ರಾಚಾರ್ಯ ಬಿ.ವಿಠಲ್ ರಾವ್‍ಮ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷ ಜಯರಾಂ ದೇರಪ್ಪಜ್ಜನ ಮನೆ , ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಲೋಕೇಶ್ ಬಿ.ಎನ್, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ದಿನೇಶ್ ಅವರುಗಳು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಕೊಲ್ಯದ ಗಿರೀಶ್ ಹೇಳಿದರು.

ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಮಂದ್ರೀರ ಮೋಹನ್‍ದಾಸ್ ಹಾಗೂ ಕುಡೆಕಲ್ ಸಂತೋಷ್ ಹಾಜರಿದ್ದರು.