ಮಡಿಕೇರಿ, ಜೂ. 14: ಬೆಂಗಳೂರು ಕೊಡವ ಸಮಾಜದಿಂದ ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಾಕಿ ತಂಡ ಮೈಸೂರಿನಲ್ಲಿ ಪಂದ್ಯವೊಂದರಲ್ಲಿ ಭಾಗವಹಿಸಿ ಆರು ಮಂದಿ ವಿದ್ಯಾರ್ಥಿಗಳು ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಬೈಲ್‍ಕೊಪ್ಪ ಬಳಿ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದರು. ಇನ್ನುಳಿದ ಮೂವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಅಪಾರ ಚಿಕಿತ್ಸಾ ವೆಚ್ಚ ತಗಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಡವ ಸಮಾಜದ ಆಡಳಿತ ಮಂಡಳಿಯ ಮನವಿ ಮೇರೆಗೆ ಸದಸ್ಯರಿಂದ ಒಟ್ಟು ರೂ. 4.62 ಲಕ್ಷ ಸಂಗ್ರಹವಾಗಿದ್ದು, ಈ ಮೊತ್ತವನ್ನು ಇಂದು ಕೊಡವ ಸಮಾಜದ ಅಧ್ಯಕ್ಷ ಮಂಡೇಯಡ ಎ. ರವಿ ಉತ್ತಪ್ಪ ಹಾಗೂ ಗೌರವ ಕಾರ್ಯದರ್ಶಿ ಚನ್ನಪಂಡ ಕೆ. ಸುಬ್ಬಯ್ಯ ಅವರು ಮಡಿಕೇರಿಯಲ್ಲಿ ಪೋಷಕರ ಸಮ್ಮುಖದಲ್ಲಿ ಮೂವರು ವಿದ್ಯಾರ್ಥಿಗೆ ರೂ. 1,54,117 ಹಣವನ್ನು ವಿತರಿಸಿದರು.