ಸೋಮವಾರಪೇಟೆ, ಅ. 28: ಕೊಡಗಿನ ಪ್ರತಿ ಕಾಫಿ ಮಂಡಳಿಗಳಿಗೆ ಮೊಬೈಲ್ ರಾಸಾಯನಿಕ ಪರೀಕ್ಷಾ ಯಂತ್ರ ಸ್ಥಾಪಿಸಬೇಕೆಂದು ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಕೇಂದ್ರ ವಾಣಿಜ್ಯ ಮಂತ್ರಿ ನಿರ್ಮಲಾ ಸೀತಾರಾಮನ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರುಗಳಿಗೆ ಮನವಿ ಸಲ್ಲಿಸಲಾಗಿದೆ.

ಇಲ್ಲಿನ ಬೆಳೆಗಾರರ ಹೋರಾಟ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಬೆಳೆಗಾರರ ಹಿತ ಕಾಪಾಡುವ ದೃಷ್ಟಿಯಿಂದ ಪ್ರತಿ ಕಾಫಿ ಮಂಡಳಿ ಕಚೇರಿಗೆ ಒಳಪಟ್ಟಂತೆ ಸಂಚಾರಿ ರಾಸಾಯನಿಕ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಪತ್ರಬರೆದು ಮನವಿ ಮಾಡಿಕೊಳ್ಳಲಾಗುವದು ಎಂದು ಸಮಿತಿ ಅಧ್ಯಕ್ಷ ಮುದ್ದಪ್ಪ ತಿಳಿಸಿದರು.

ಇದರೊಂದಿಗೆ ಕಾಳುಮೆಣಸು ವಿಮೆಯ ಸಾಧಕ ಬಾಧಕಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಬೇಕು. ಕಾಫಿ ಕಾಯಿದೆ 2016ರ ಸಾಧಕ ಬಾಧಕಗಳನ್ನು ಚರ್ಚಿಸಲು ಲೋಕಸಭಾ ಸದಸ್ಯರು ಭೇಟಿ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಘದ ಮನವಿಗೆ ಸ್ಪಂದಿಸಿ ಕಾಫಿ ಮಂಡಳಿಗೆ ಸಹಾಯಧನ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಲಾಯಿತು.

ಸೋಮವಾರಪೇಟೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬೆಳೆಗಾರರ ಹಿತ ಕಾಪಾಡಲು ಸರ್ಕಾರದ ಗಮನ ಸೆಳೆಯಬೇಕು.

ಈ ನಿಟ್ಟಿನಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ರಂಜನ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಇದರೊಂದಿಗೆ ಆರ್‍ಟಿಸಿ ಕಲಂ ನಲ್ಲಿ ಕಾಫಿ, ಕಾಳುಮೆಣಸು, ಕಿತ್ತಳೆ ಸೇರಿದಂತೆ ಇತರ ಬೆಳೆಗಳನ್ನು ಖಾಯಂ ಆಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಜಲಾ ಹೂವಯ್ಯ, ಶ್ರೀಕೇಶ್, ಕಾರ್ಯದರ್ಶಿ ಸುದೀಪ್, ವಕ್ತಾರ ಶ್ಯಾಮ್ ಪ್ರಸಾದ್, ಸದಸ್ಯ ಬೋಪಯ್ಯ, ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.