ಮಡಿಕೇರಿ ಜು.22 : ನಗರದ ಮಹದೇವಪೇಟೆ ರಸ್ತೆ ವಿಸ್ತರಣೆ ಕಾರ್ಯ ವಿಳಂಬವಾಗುತ್ತಿದೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಪೀಪಲ್ ಮೂಮೆಂಟ್ಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.ಸ್ಥಳಕ್ಕೆ ಆಗಮಿಸಿದ ನಗರಸಭಾ ಇಂಜಿನಿಯರ್, ಚರಂಡಿಗಳಿಗೆ ಸ್ಲ್ಯಾಬ್‍ಗಳನ್ನು ಅಳವಡಿಸಲು ಉದ್ದೇಶಿತ ಯೋಜನೆಯಲ್ಲಿ ಅವಕಾಶವಿಲ್ಲವೆಂದು ತಿಳಿಸಿದರು. ಅಲ್ಲದೆ, ರಸ್ತೆ ಕಾಮಗಾರಿ ಪೂರ್ಣ ಗೊಳ್ಳುವವರೆಗೆ ಪಾದಚಾರಿಗಳು ಓಡಾಡಬಾರದೆಂದು ಸಮಜಾಯಿಷಿಕೆ ನೀಡಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಪ್ರತಿಭಟನಾ ಕಾರರು, ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸದೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಪಲಾಯನ ವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗೆ ಮನವಿ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜನ ಸಂಪರ್ಕ ಸಭೆಗೆ ತೆರಳಿದ ಹರೀಶ್ ಆಚಾರ್ಯ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಹದೇವಪೇಟೆ ರಸ್ತೆ ಅವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಜನರಿಗೆ ಆಗುತ್ತಿರುವ ಕಷ್ಟ - ನಷ್ಟದ ಬಗ್ಗೆ ನ್ಯಾಯಾಲಯದ ಮೊರೆ ಹೋಗುವದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಆರ್.ಬಿ. ರವಿ, ಇ.ಎಲ್. ಅಶೋಕ್, ನಿತ್ಯಾನಂದ ರೈ, ಇಂದಿರಾ ನಗರದ ಹರೀಶ್, ಗಣೇಶ್ ಆಚಾರ್ಯ, ಆರ್.ಬಿ. ಪ್ರವೀಣ್, ಶಫಿ, ಇಬ್ರಾಹಿಂ, ಜಯರಾಂ ಮತ್ತಿತರರು ಪಾಲ್ಗೊಂಡಿದ್ದರು.