ಮಡಿಕೇರಿ, ಜೂ. 11: ಮಹದೇವಪೇಟೆ ರಸ್ತೆ ಕಾಮಗಾರಿಯನ್ನು ಇಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಪರಿಶೀಲನೆ ನಡೆಸಿದರು.

ಎ.ವಿ.ಶಾಲೆ ಬಳಿಯಿಂದ ಐ.ಜಿ. ವೃತ್ತದವರೆಗೂ ಖುದ್ದು ಪರಿಶೀಲನೆ ನಡೆಸಿದ ಅವರು ಅಲ್ಲಿನ ನಿವಾಸಿಗಳ ಕೋರಿಕೆಗಳನ್ನು ಆಲಿಸಿದರು. ಬಳಿಕ ಕಾಮಗಾರಿಗೆ ಸಂಬಂಧಿಸಿದ ಇಂಜಿನಿಯರ್‍ಗಳು ಹಾಗೂ ಅಧಿಕಾರಿಗಳನ್ನು ಕರೆಸಿ ಕಾಮಗಾರಿಯ ಗುಣಮಟ್ಟದ ಕುರಿತು ಮಾಹಿತಿ ಪಡೆದರು. ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗಾಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ನಗರಸಭಾ ಆಯುಕ್ತೆ ಪುಷ್ಪಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್, ಸದಸ್ಯರಾದ ಉಣ್ಣಿಕೃಷ್ಣ, ಕೆ.ಎಸ್. ರಮೇಶ್, ಅನಿತಾ ಪೂವಯ್ಯ, ಸಂಗೀತ ಪ್ರಸನ್ನ, ಸವಿತಾ ರಾಕೇಶ್ ಹಾಗೂ ಅಧಿಕಾರಿಗಳು ಇದ್ದರು.