ಮಡಿಕೇರಿ, ಜೂ. 8: ಚೇಲಾವರ ಕಬ್ಬೆ ಬೆಟ್ಟದಲ್ಲಿ ಇತ್ತೀಚೆಗೆ ಕಡಂಗದ ಕಾಫಿ ವರ್ತಕ ಮುನೀರ್ ಅಮಾನವೀಯ ರೀತಿಯಲ್ಲಿ ಹತ್ಯೆಗೈಯ್ಯಲ್ಪಟ್ಟಿದ್ದು ಪ್ರಕರಣವನ್ನು ಸೂಕ್ತ ತನಿಖೆಗೊಳಪಡಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆ ಪೊಲೀಸ್ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಪ್ರಕರಣದ ಸಂಬಂಧ ಕೇವಲ ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ರಚಿಸಿದ ತನಿಖಾ ತಂಡ ಯಾವದೇ ಕ್ರಮ ಕೈಗೊಂಡಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲು ಕೋರಿ ಸಂಸ್ಥೆ ವತಿಯಿಂದ ನಾಪೋಕ್ಲು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಸಂದರ್ಭ ನಾಪೋಕ್ಲು ಠಾಣಾಧಿಕಾರಿ 7 ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಆದರೆ 7 ದಿನಗಳು ಕಳೆದರೂ ತನಿಖೆಯಲ್ಲಿ ಯಾವದೇ ಪ್ರಗತಿ ಕಂಡಿಲ್ಲ.

ಕೆಲವು ಮಂತ್ರವಾದಿಗಳು ಪೂಜೆ ಸಲ್ಲಿಸಿರುವ ಕುರುಹುಗಳು, ಘಟನೆಯ ದಿನ ದ್ವಿಚಕ್ರ ವಾಹನ ಚಾಲನೆ ಬಾರದ ಸಲಾಂ ದ್ವಿಚಕ್ರ ವಾಹನದಲ್ಲಿ ಕಡಂಗದಲ್ಲಿರುವ ತನ್ನ ಮನೆಗೆ ಮರಳಿದ್ದು, ಈ ಎಲ್ಲಾ ಬೆಳವಣಿಗೆಯು ಗ್ರಾಮಸ್ಥರಲ್ಲಿ ಸಂಶಯ ಮೂಡುವಂತಾಗಿದೆ. ಘಟನೆಯ ಹಿಂದಿನ ಆರೋಪಿಗಳನ್ನು ತಕ್ಷಣ ಬಂಧಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭ ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಎ. ಹನೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಐ. ಏಜಾಸ್ ಅಹ್ಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎ.ಎ. ಶಾಫೀಕ್, ಜಿಲ್ಲಾ ಸಮಿತಿ ಸದಸ್ಯ ಕೋಳುಮಂಡ ರಫೀಕ್, ವಕೀಲ ಹಮೀದ್ ಅನ್ಸಾರಿ, ತಾಲೂಕು ಅಧ್ಯಕ್ಷ ನಾಸಿರ್ ಮಕ್ಕಿ, ಕಾರ್ಯದರ್ಶಿ ಹ್ಯಾರಿಸ್, ಮೃತ ಮುನೀರ್ ಸಂಬಂಧಿಕರಾದ ಸುಲೈಮಾನ್, ಮೂಸ, ಕುಂಞಮದ್ ಉಪಸ್ಥಿತರಿದ್ದರು.