ಮಡಿಕೇರಿ, ಜೂ. 9: ಪೊಲೀಸ್ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ಅಭಿಮಾನ - ಗೌರವ ಹೆಚ್ಚಿಸಲು, ಸಮಾಜದಲ್ಲಿ ಸ್ವಾಸ್ಥ್ಯ ರಕ್ಷಿಸಲು ಅಲ್ಲಲ್ಲಿ ಸಮುದಾಯ ಪೊಲೀಸ್ ತಂಡ ರಚಿಸುವ ಇಂಗಿತ ಇರುವದಾಗಿ ಎಸ್‍ಪಿ ರಾಜೇಂದ್ರ ಪ್ರಸಾದ್ ಹೇಳಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಕಂದಕ ಅಳಿಸಿ ಸ್ನೇಹ ಸೇತುವೆ ನಿರ್ಮಿಸಲು ಸಮುದಾಯ ಪೊಲೀಸ್ ಸಹಕಾರಿ ಎಂದರು.

ಸಮಾಜದ ಸ್ವಾಸ್ಥ್ಯ ಉಳಿಯಲು ಸಮುದಾಯ ಸಿವಿಲ್ ವಸ್ತ್ರ ಧರಿಸಿರುವ ಪೊಲೀಸರಂತೆ, ಪೊಲೀಸರು ಸಮವಸ್ತ್ರ ಧರಿಸಿರುವ ಸಾರ್ವಜನಿಕರಂತೆ ಮನೋಭಾವ ಹೊಂದುವದು ಅವಶ್ಯ ಎಂದರು. ಪ್ರತಿ ಊರುಗಳಲ್ಲೂ ಜನಸಂಪರ್ಕ ಸಭೆ ನಡೆಸುವದರೊಂದಿಗೆ ಸಮುದಾಯ ತಂಡಗಳನ್ನು ರಚಿಸುವದಾಗಿ ಹೇಳಿದರು.

ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಹೆಚ್ಚುವಂತೆ ಬದಲಾವಣೆ ತರುವದಾಗಿ ಹೇಳಿದ ಅವರು ಸಮಾಜ ಘಾತುಕ ಶಕ್ತಿಗಳು ಹಾಗೂ ರೌಡಿಶೀಟರ್‍ಗಳ ಮೇಲೆ ನಿಗಾ ಇರಿಸುವದಾಗಿ ಹೇಳಿದರು.

ಇಲೆಕ್ಟ್ರಾನಿಕ್ ಬೀಟ್!

ಪೊಲೀಸರು ತಪ್ಪದೆ ರಾತ್ರಿ ಗಸ್ತು ನಡೆಸುವದನ್ನು ನಿಯಂತ್ರಿಸಲು ಇಲೆಕ್ಟ್ರಾನಿಕ್ ಬೀಟ್ ಆರಂಭಿಸಲಾಗುವದು. ನಿಗಧಿತ ಸ್ಥಳಕ್ಕೆ ತೆರಳುವ ಪೊಲೀಸರು ಅಲ್ಲಿ ಇರಿಸಿರುವ ಕಂಪ್ಯೂಟರೀಕೃತ ಕಾರ್ಡ್ ಸಂಪರ್ಕಿಸಿ ಚಿಪ್ಪನ್ನು ತರಬೇಕು. ಮರುದಿನ ಪೊಲೀಸ್ ಕಚೇರಿಯ ಕಂಪ್ಯೂಟರಿನಲ್ಲಿ ಅದನ್ನು ಪರಿಶೀಲಿಸಿದರೆ ಇಂತಿಷ್ಟೇ ಸಮಯಕ್ಕೆ ಪೊಲೀಸರು ಅಲ್ಲಿ ತೆರಳಿದ್ದರೆಂದು ತಿಳಿಯುತ್ತದೆ. ಇಲ್ಲದಿದ್ದಲ್ಲಿ ಬೀಟ್ ಪುಸ್ತಕಗಳಿಗೆ ಮನಬಂದಂತೆ ಮರುದಿನವೂ ಸಮಯ- ಸಹಿ ನಮೂದಿಸಬಹುದಿತ್ತು.

ಯೋಗ - ಆರೋಗ್ಯ

ಪೊಲೀಸರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಅವರಿಗೆ ಯೋಗ ಶಿಕ್ಷಣ ಹಾಗೂ ತರಬೇತಿ ನೀಡಲಾಗುವದು. ಜೊತೆಗೆ, ಪ್ರತಿ ಪೊಲೀಸ್ ಸಿಬ್ಬಂದಿಗೂ ಕಂಪ್ಯೂಟರ್ ಶಿಕ್ಷಣವನ್ನೂ ಒದಗಿಸಲಾಗುವದೆಂದು ಪೊಲೀಸ್ ಉನ್ನತಾಧಿಕಾರಿ ನುಡಿದರು.

ಸಿ.ಸಿ. - ಟಿವಿ

ಹೊಟೇಲ್‍ಗಳು ಮತ್ತು ಹೋಂ ಸ್ಟೇಗಳಲ್ಲಿ ಖಡ್ಡಾಯವಾಗಿ ಸಿ.ಸಿ. ಟಿವಿ ಅಳವಡಿಸಲು ಕ್ರಮಕೈಗೊಳ್ಳಲಾಗುವದು. ಅಪರಾಧ ಹಾಗೂ ಅನಾಚಾರ ತಡೆಗೆ ಇದು ಅತಿ ಅವಶ್ಯ ಎಂದು ರಾಜೇಂದ್ರ ಪ್ರಸಾದ್ ಹೇಳಿದರು. ಹೆಚ್ಚುತ್ತಿರುವ ಟ್ರಾಫಿಕ್ ಹಾಗೂ ಅಪಘಾತ ತಡೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸ ಲಾಗುವದು. ದಂಡ ಹಾಕುವದು ಸಮಸ್ಯೆಗೆ ಪರಿಹಾರ ಅಲ್ಲ ಎಂದ ಅವರು, ಮಾನಸಿಕ ಜಾಗೃತಿ ಅವಶ್ಯ ಎಂದರು.

ಜಿಲ್ಲೆಯ ಗಡಿಭಾಗಗಳಲ್ಲೂ ಬೀಟ್ ಹೆಚ್ಚಿಸಿ ಕಾನೂನು ಸ್ಥಿತಿ ಉತ್ತಮ ಪಡಿಸಲಾಗುವದು ಎಂದರು.