ಪೊನ್ನಂಪೇಟೆ, ಜೂ. 14: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದೆ. ಅದರಲ್ಲೂ ಹೆಚ್ಚಾಗಿ ವೀರಾಜಪೇಟೆ ತಾಲೂಕಿನಲ್ಲಿ ಪುಂಡಾನೆಗಳ ಉಪಟಳ ದಿನೇ-ದಿನೇ ಹೆಚ್ಚುತ್ತಿದೆ. ಶಾಲಾ ಮಕ್ಕಳೂ ಸೇರಿದಂತೆ ಸಾರ್ವಜನಿಕರು ಕಾಡಾನೆಗಳ ಧಾಳಿಯ ಭಯದ ನೆರಳಲ್ಲೇ ದಿನದೂಡುವಂತಾಗಿದೆ. ಮಾನವ ಜೀವಕ್ಕೆ ಸಂಚಾಕಾರ ಒಡ್ಡುವ ಪುಂಡಾನೆಗಳನ್ನು ಗುಂಡಿಟ್ಟು ಕೊಲ್ಲಲು ವಿಶೇಷ ಅನುಮತಿಗಾಗಿ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವೊಂದನ್ನು ತಾ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆ ಅಂಗೀಕರಿಸಿದೆ.

ಪೊನ್ನಂಪೇಟೆಯ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾ.ಪಂ. ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ ಸಭೆಯಲ್ಲಿದ್ದ ಬಹುಪಾಲು ಚುನಾಯಿತ ಪ್ರತಿನಿಧಿಗಳು

ಮಿತಿ ಮೀರುತ್ತಿರುವ ಕಾಡಾನೆ ಉಪಟಳ ಕುರಿತ ವಿಷಯ ಪ್ರಸ್ತಾಪಿಸಿ ಮಾತನಾಡಿ, ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಜಿ.ಪಂ. ಸದಸ್ಯ ಬಿ.ಎನ್ ಪ್ರಥ್ಯು ಸಭೆಯಲ್ಲಿ ಮಾತನಾಡಿ, ಕಾಡಾನೆ ಹಾವಳಿಯನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ನರಹಂತಕ ಆನೆಗಳನ್ನು ಕೊಲ್ಲಲು ಅಗತ್ಯ ಕ್ರಮ ಕೈಗೊಳ್ಳುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸುವಂತೆ ಒತ್ತಾಯಿಸಿದರು. ಇದಕ್ಕೆ ದ್ವನಿಗೂಡಿಸಿದ ಶಾಸಕ ಕೆ.ಜಿ ಬೋಪಯ್ಯ ಈಗಾಗಲೇ ಮನುಷ್ಯನ ಜೀವಕ್ಕೆ ಹಾನಿಪಡಿಸುವ ವನ್ಯ ಪ್ರಾಣಿಗಳನ್ನು ಕೊಲ್ಲಲು ದೇಶದ ವಿವಿಧೆಡೆ ಕೆಂದ್ರ ಸರಕಾರ ವಿಶೇಷ ಅನುಮತಿ ನೀಡಿದೆ. ಹಾಗೆಯೇ ಕರ್ನಾಟಕದಲ್ಲೂ ಮನುಷ್ಯರನ್ನು ಬಲಿ ಪಡೆಯುತ್ತಿರುವ ಕಾಡಾನೆಗಳನ್ನು ಗುಂಡಿಟ್ಟು ಕೊಲ್ಲಲು ರಾಜ್ಯ ಸರಕಾರ ಕೇಂದ್ರಕ್ಕೆ ವಿಶೇಷ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಈ ಕುರಿತ ಪ್ರಸ್ತಾವನೆಗಾಗಿ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯ ಒಪ್ಪಿಗೆ ಇದ್ದರೆ ಅಂಗೀಕರಿಸಬಹುದು ಎಂದು ಹೇಳಿದಾಗ ಇಡೀ ಸಭೆ ಇದಕ್ಕೆ ಒಪ್ಪಿಗೆ ಸೂಚಿಸಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಜಿ.ಪಂ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಈ ನಿರ್ಣಯದ ವಿರುದ್ಧ ಧ್ವನಿ ಎತ್ತುವ ಕೆಲವು ಪರಿಸರವಾದಿಗಳ ಸಂಖ್ಯೆಗೇನು ಕೊಡಗಿನಲ್ಲಿ ಕಡಿಮೆಯಿಲ್ಲ. ಅವರನ್ನು ಎದುರಿಸ ಬೇಕಾಗುತ್ತದೆ ಎಂದಾಗ ಅದನ್ನು ‘ಮುಂದೆ ನೋಡಿಕೊಳ್ಳೋಣ’ ಎಂದು ಶಾಸಕರು ಹೇಳಿದರು. ಮತ್ತೆ ಆಕ್ರೋಶಿತ ರಾಗಿ ಮಾತನಾಡಿದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲಾ ರಾಜ್ಯಕ್ಕೂ ಒಂದೇ ಕಾನೂನಾಗಿದೆ. ನರಹಂತಕ ವನ್ಯ ಪ್ರಾಣಿಗಳನ್ನು ಕೊಲ್ಲಲು ಕೇಂದ್ರ ಸರಕಾರ ವಿಶೇಷ ಅನುಮತಿ ನೀಡಿರುವಂತೆ ಕೊಡಗಿನ ಪುಂಡಾನೆಗಳ ಮಟ್ಟ ಹಾಕಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿ ಮಾತನಾಡಿದ ಕೆ.ಜಿ. ಬೋಪಯ್ಯ ಅವರು ಕೊಡಗಿನ ಅರಣ್ಯದ ನಿರ್ದಿಷ್ಟ ವಿಸೀರ್ಣದಲ್ಲಿ ಇರಬೇಕಿದ್ದ ಕಾಡಾನೆಗಳ ಸಂಖ್ಯೆ ಎರಡು ಪಟ್ಟು ಜಾಸ್ತಿ ಇದೆ. ಕೆಲವೆಡೆ ಇದಕ್ಕಿಂತಲೂ ಹೆಚ್ಚಿದೆ. ಈಗಿದ್ದಾಗ ಮನುಷ್ಯನ ಬದುಕು ಎಷ್ಟರ ಮಟ್ಟಿಗೆ ಸಾಧ್ಯ ಎಂದು ಸಭೆಯಲ್ಲಿದ್ದ ಅರಣ್ಯಾಧಿಕಾರಿಗಳನ್ನು ಮಾರ್ಮಿಕ ವಾಗಿ ಪ್ರಶ್ನಿಸಿದರಲ್ಲದೆ, ಕೂಡಲೇ ಈ ವಾಸ್ತವ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸುವಂತೆಯೂ, ವಿಶೇಷ ಅನುಮತಿಗಾಗಿ ಅಗತ್ಯ ಪ್ರಸ್ತಾಪ ಕಳಿಸುವಂತೆಯೂ ಸೂಚಿಸಿದರು.

ಅನಧಿಕೃತ ಸ್ಟೇ ಮೇಲೆ ಕ್ರಮ

ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಕೆಲವು ಹೋಂಸ್ಟೇಗಳಲ್ಲಿ ನಡೆಯುತ್ತಿದೆ ಎನ್ನಲಾಗುವ ಅನೈತಿಕ ಚಟುವಟಿಕೆಗಳ ವಿರುದ್ಧ ವ್ಯಾಪಕ ಆರೋಪಗಳು ಕೇಳಿಬಂತು. ವಿಷಯ ಪ್ರಸ್ತಾಪಿಸಿ ಮಾತನಾಡಿದ ಜಿ.ಪಂ. ಸದಸ್ಯ ಮುಕೊಂಡ ವಿಜು ಸುಬ್ರಮಣಿ ವೀರಾಜಪೇಟೆ ತಾಲೂಕಿನ ಕೆಲವು ಹೋಂಸ್ಟೇಗಳು ಅನೈತಿಕ ಚಟುವಟಿಕೆ ಯ ತಾಣಗಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಮುಕೊಂಡ ವಿಜು ಸುಬ್ರಮಣಿ, ಕುಗ್ರಾಮಗಳಲ್ಲೂ ಅನಧಿಕೃತ ಹೋಂಸ್ಟೇಗಳು ನಿರಂತರವಾಗಿ ತಲೆ ಎತ್ತುತ್ತಿದೆ ಎಂದರು. ಈ ವೇಳೆ ವಿವರಣೆ ನೀಡಿದ ಡಿ.ವೈಎಸ್‍ಪಿ ಕುಮಾರ್ ಚಂದ್ರ ಅವರು ಈಗಾಗಲೇ ನೋಂದಣಿಯಾಗದ ಅನಧಿಕೃತ ಹೋಂಸ್ಟೇಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಕೂಡಲೇ ಇದನ್ನು ಮುಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಹೋಂಸ್ಟೇಗಳ ಜೊತೆಗೆ ತಾಲೂಕಿನ ಅಲ್ಲಲ್ಲಿ ಅನಧಿಕೃತ ಕ್ಲಬ್‍ಗಳು ತಲೆ ಎತ್ತಿದ್ದು ಈ ಕುರಿತು ವ್ಯಾಪಕ ದೂರುಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಡಿವೈಎಸ್ಪಿ ಅವರಿಗೆ ನಿರ್ದೇಶಿಸಿದರಲ್ಲದೇ, ಅಧಿಕೃತ ಹೋಂಸ್ಟೇಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವದನ್ನು ಕಡ್ಡಾಯ ಗೊಳಿಸಬೇಕು ಎಂದರು. ಸಭೆಯಲ್ಲಿದ್ದ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ, ಕಾರ್ಮಿಕರ ನೆಪದಲ್ಲಿ ಕೊಡಗಿಗೆ ಬರುತ್ತಿರುವ ಬಾಂಗ್ಲ ದೇಶಿಗರ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಅಗತ್ಯ ಎಂದಾಗ ಕೂಡಲೇ ಪ್ರತಿಕ್ರಿಯಿಸಿದ ಡಿವೈಎಸ್ಪಿ ಕುಮಾರ್‍ಚಂದ್ರ ಕಾರ್ಮಿಕರನ್ನು ಕರೆಸುವವರು ಯಾರು ಎಂದು ಪ್ರಶ್ನಿಸುವ ಮೂಲಕ ಉತ್ತರ ನೀಡಿದರು. ಜವಾಬ್ದಾರಿ ಕೇವಲ ಇಲಾಖೆಯದ್ದು ಮಾತ್ರವಲ್ಲ ನಾಗರಿಕ ಸಮಾಜವೂ ಸ್ಪಂದಿಸುವಂತಾಗಬೇಕು ಎಂದು ಹೇಳಿದರು.

ಶಾಸಕ ಬೋಪಯ್ಯ ಮಧ್ಯ ಪ್ರವೇಶಿಸಿ ಮಾತನಾಡಿ, ಅಪರಾಧ ಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ತೋಟ ಮಾಲೀಕರು ತಮ್ಮಲ್ಲಿರುವ ಹೊರಗಿನ ಕಾರ್ಮಿಕರ ಭಾವಚಿತ್ರ ಸೇರಿದಂತೆ ಸಮಗ್ರ ವಿವರವನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಒದಗಿಸಲು ಈ ಹಿಂದೆ ಸಾಕಷ್ಟು ಬಾರಿ ಸೂಚಿಸಿದರೂ ಪ್ರಯೋಜನವಾಗಲಿಲ್ಲ. ತೋಟ ಮಾಲೀಕರು ಈ ಕುರಿತು ಸ್ಪಂದಿಸಬೇಕೆಂದು ಮನವಿ ಮಾಡಿದರು. ವೀರಾಜಪೇಟೆ ಮತ್ತು ಗೋಣಿಕೊಪ್ಪಲಿನಲ್ಲಿ ವಾಹನಗಳ ಪಾರ್ಕಿಂಗ್ ವಿಷಯದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿದ್ದ ಜಿ.ಪಂ. ಸದಸ್ಯರಾದ ಅಚ್ಚಪಂಡ ಮಹೇಶ್ ಮತ್ತು ವಿಜು ಸುಬ್ರಮಣಿ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಡಿವೈಎಸ್ಪಿ ಅವರು ವಿಧ್ಯಾವಂತರೆ ಪಾರ್ಕಿಂಗ್ ವಿಷಯದಲ್ಲಿ ನಿರಂತರವಾಗಿ ತಪ್ಪೆಸಗಿದರೆ ಮಾಡುವದಾದರೂ ಏನು ಎಂದು ಕೇಳಿದರು. ಮತ್ತೆ ಮಾತು ಮುಂದುವರಿಸಿದ ಅವರು ವೀರಾಜಪೇಟೆ ಉಪವಿಭಾಗಕ್ಕೆ ನೂತನವಾಗಿ 45 ಸಿಬ್ಬಂದಿಗಳ ನೇಮಕಾತಿಯಾಗಿದೆ. ಅವರಿಗೆ ಸಂಚಾರಿ ವ್ಯವಸ್ಥೆಯ ಬಗ್ಗೆ ವಿಶೇಷ ತರಬೇತಿ ನೀಡಿ ಸಂಚಾರಿ ಪೊಲೀಸರ ಸಮವಸ್ತ್ರದೊಂದಿಗೆ ಶೀಘ್ರದಲ್ಲೇ ಕರ್ತವ್ಯಕ್ಕೆ ನಿಯೋಜಿಸಲಾಗುವದು ಎಂದರು. ಯಾವದೇ ಕಾನೂನನ್ನು ಪಾಲಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಈ ವೇಳೆ ಕಾನೂನು ಉಲ್ಲಂಘಿಸಿದವರ ಪರವಾಗಿ ಯಾವದೇ ಜನಪ್ರತಿನಿಧಿಗಳು ಶಿಫಾರಸ್ಸು ಮಾಡಿ ಒತ್ತಡ ತರುವದು ಬೇಡ ಎಂದು ಸಭೆಯಲ್ಲಿದ್ದ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಸ್ಪಷ್ಟವಾಗಿ ಹೇಳಿದರು.

ಅಕ್ರಮ ಮದ್ಯ

ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ ಗಂಭೀರ ಆರೋಪದೊಂದಿಗೆ ಮಾತನಾಡಿದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು, ಗ್ರಾಮ ಗ್ರಾಮಗಳಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಅಕ್ರಮ ಮದ್ಯ ಮಾರಾಟ ದಂಧೆಯ ವಿರುದ್ಧ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೆ ದಂಧೆಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತನ್ನ ‘ಮಾಸಿಕ ಮಾಮೂಲಿ’ಯನ್ನು ಹೆಚ್ಚಿಸಿಕೊಳ್ಳುತ್ತದೆ ಎಂದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಪಿ.ಆರ್ ಪಂಕಜ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಗಿರಿಜನರಿಗೆ ತೊಂದರೆಯಾಗುತ್ತಿದೆ ಎಂದು ಆಪಾದಿಸಿದರು. ಈ ವೇಳೆ ಸಭೆಯಲ್ಲಿದ್ದ ಅಬಕಾರಿ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡ ಬಿ.ಎನ್. ಪ್ರಥ್ಯು, ಅಕ್ರಮ ಮದ್ಯ ಮಾರಾಟ ದಂಧೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದಿರುವ ಹಿಂದಿನ ರಹಸ್ಯವೇನು ಎಂದು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅಕ್ರಮ ಮಾರಾಟ ದಂಧೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಬಕಾರಿ ನಿರೀಕ್ಷರಿಗೆ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರು, ಅಕ್ರಮ ಮಧ್ಯ ಮಾರಾಟವನ್ನು ನಿಯಂತ್ರಿಸಬೇಕಾದರೆ ನಿಯಮ ಪಾಲಿಸದ ಬಾರ್‍ಗಳ ವಿರುದ್ಧ ಮೊದಲು ಕ್ರಮ ಜರುಗಿಸಬೇಕು. ಅನಿಯಂತ್ರಿತ ಮದ್ಯ ಸರಬರಾಜು ತಡೆಗಟ್ಟಿದರೆ ಮಾತ್ರ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಸಾಧ್ಯ ಎಂದು ಹೇಳಿದಾಗ, ಸಲಹೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಈ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.

ಕಂದಾಯ ಇಲಾಖೆ

ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಎಂದಿನಂತೆ ಜನಪ್ರತಿನಿಧಿಗಳಲ್ಲಿ ವಾಗುವದಿಲ್ಲ. ಬದಲಿಗೆ ಏಜೆಂಟರ ಮೂಲಕ ಅರ್ಜಿ ಸಲ್ಲಿಕೆಯಾದರೆ ನೀಡುವ ಮೊತ್ತದ ಸ್ವರೂಪಕ್ಕೆ ಅನುಗುಣವಾಗಿ ಕಂದಾಯ ಮತ್ತು ಸರ್ವೆ ವಿಭಾಗದಲ್ಲಿ ಕೆಲಸ ಸುಲಭ ವಾಗುತ್ತದೆ ಎಂದು ಆರೋಪಿಸಿದರು.

94 ಸಿ ಅಡಿಯಲ್ಲಿ ಹಕ್ಕು ಪತ್ರಕ್ಕಾಗಿ ಎಷ್ಟು ಪಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಶಾಸಕರು ತಹಶೀಲ್ದಾರರನ್ನು ಪ್ರಶ್ನಿಸಿದಾಗ ಸಮರ್ಪಕ ಮಾಹಿತಿ ನೀಡದಿದ್ದಾಗ ತಹಶೀಲ್ದಾರರು ಮತ್ತೊಮ್ಮೆ ತರಾಟೆಗೆ ಒಳಗಾಗಬೇಕಾಯಿತು. ಜೂನ್ 25ರ ಒಳಗಾಗಿ ಸರ್ವೆ ನಡೆಸಿ ಫಲಾನುಭವಿ ಗಳಿಗೆ ಹಕ್ಕು ಪತ್ರ ನೀಡುವಂತೆ ಶಾಸಕರು ಸೂಚಿಸಿದರು. 11ಈ ಮತ್ತು 11ಬಿ ಗೆ ಸರಕಾರ 5 ಜಿಲ್ಲೆಗೆ ವಿನಾಯಿತಿ ನೀಡಿದ್ದು, ಈಗಾಗಲೇ ಆದೇಶ ಹೊರಬಿದ್ದಿದೆ. ಆದರಿಂದ ಜನತೆಯ ಅನುಕೂಲಕ್ಕಾಗಿ ಮನೆಗೆ ನೂತನ ವಿದ್ಯುತ್ ಸಂಪರ್ಕ ಒದಗಿಸಲು ಕೂಡಲೇ ನಿರಾಕ್ಷೇಪಣೆ ಪತ್ರ ನೀಡುವಂತೆ ಶಾಸಕರು ಸಭೆಯಲ್ಲಿದ್ದ ಎಲ್ಲಾ ಪಿ.ಡಿ.ಓ.ಗಳಿಗೆ ಸೂಚಿಸಿದರು. ವೀರಾಜಪೇಟೆ ಮತ್ತು ಗೋಣಿಕೊಪ್ಪಲಿ ನಲ್ಲಿ 108 ಆ್ಯಂಬುಲನ್ಸ್ ಸೇವೆ ಲಭ್ಯವಾಗದ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡಾಗ, ಈ ಬಗ್ಗೆ ಸರಕಾರದ ಗಮನ ಸೆಳೆಯುವದಾಗಿ ಬರವಸೆ ನೀಡಿದರು. ಅಪಘಾತಗಳನ್ನು ತಡೆಗಟ್ಟಲು ಮುಖ್ಯ ರಸ್ತೆಯ ಎರಡು ಬದಿಯ ಕಾಡು ಕಡಿಯುವಂತೆ ಲೋಕೋಪಯೊಗಿ ಇಂಜಿನಿಯರರಿಗೆ ಶಾಸಕರು ಸೂಚಿಸಿದರು. ವಿವಿಧ ಇಲಾಖೆಯಿಂದ ನೀಡಲಾಗುವ ಸವಲತ್ತುಗಳನ್ನು ವಿತರಿಸುವಾಗ ಜನಪ್ರತಿನಿಧಿಗಳಿಗೆ ಮೊದಲ ಆದ್ಯತೆ ನೀಡುವಂತೆಯೂ ಸೂಚಿಸಿದ ಮಡುಗಟ್ಟಿ ನಿಂತಿದ್ದ ಆಕ್ರೋಶ ಸ್ಫೋಟಗೊಂಡಿತು. ಸಭೆಯಲ್ಲಿದ್ದ ತಹಶೀಲ್ದಾರರನ್ನು ಶಾಸಕರಾದಿಯಾಗಿ ತರಾಟೆಗೆ ತೆಗೆದುಕೊಂಡರು.

ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಯ ಮೂರು ತಾಲೂಕು ಕಚೇರಿಗಳಲ್ಲಿ ಜನರ ಕೆಲಸ ಆಗುತ್ತಿಲ್ಲ. ತಾಲೂಕು ಕಚೇರಿಯಲ್ಲಿನ ಸಿಬ್ಬಂದಿಗಳ ಮೇಲೆ ತಹಶೀಲ್ದಾರರಿಗೆ ಹಿಡಿತ ಸಾಧಿಸಲು ಆಗುತ್ತಿಲ್ಲ. ಇದರಿಂದ ಜನ ಇಲಾಖೆಗೆ ನಿರಂತರವಾಗಿ ಶಾಪ ಹಾಕುತ್ತಿದ್ದಾರೆ ಎಂದರು. ಈ ವೇಳೆ ಧ್ವನಿಗೂಡಿಸಿದ ಶಶಿ ಸುಬ್ರಮಣಿ, ತಾಲೂಕು ಕಚೇರಿ ಸಿಬ್ಬಂದಿಗಳನ್ನು ಮಧ್ಯಾಹ್ನದ ನಂತರವಂತೂ ಮಾತನಾಡಿಸಲೂ ಸಾಧ್ಯವಿಲ್ಲ ಎಂದರು. ಮುಕ್ಕಾಟಿರ ಶಿವು ಮಾದಪ್ಪ ಜನರು ನೇರವಾಗಿ ತೆರಳಿದರೆ ಕಂದಾಯ ಇಲಾಖೆಯಲ್ಲಿ ಕೆಲಸ ಬೋಪಯ್ಯ ಅವರು, ಇದೀಗ ಮಳೆಗಾಲ ಆರಂಭಗೊಂಡದ್ದರಿಂದ ಟಿಂಬರ್ ಸಾಗಾಟವನ್ನು ಸ್ಥಗಿತಗೊಳಿಸ ಬೇಕು ಎಂದು ಅರಣ್ಯಾಧಿಕಾರಿಗಳಿಗೆ ನಿರ್ದೇಶಿಸಿದರು. ರಸ್ತೆಯಲ್ಲಿ ಭಾರ ಮಿತಿಯನ್ನು ಉಲ್ಲಂಘಿಸಿ ಸಂಚರಿಸುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆರ್.ಟಿ.ಓ.ಗೆ ಪತ್ರ ಬರೆಯು ವಂತೆಯೂ ಲೋಕೋಪಯೋಗಿ ಇಂಜಿನಿಯರ್‍ಗೆ ಹೇಳಿದರು.

ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ತಾ.ಪಂ. ಇಒ ಕಿರಣ್ ರಾಯ್ ಪಡ್ನೇಕರ್ ಮೊದಲಾದವರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಕ್ಷೇತ್ರದ ಜಿ.ಪಂ. ಸದಸ್ಯರು, ವಿವಿಧ ಗ್ರಾ.ಪಂ. ಅಧ್ಯಕ್ಷರು, ಪಿ.ಡಿ.ಓ.ಗಳು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.