ಕುಶಾಲನಗರ, ಜೂ. 14: ರೋಟರಿ ಕುಶಾಲನಗರ ಮತ್ತು ರೋಟರಿ ಕೊಯಮತ್ತೂರು ಸಹಭಾಗಿತ್ವದೊಂದಿಗೆ ಈ ಸಾಲಿನಲ್ಲಿ ಅಂತರರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಮೊಟ್ಟಮೊದಲ ಬಾರಿಗೆ ಫಿಲಿಫೈನ್ಸ್ ದೇಶದಲ್ಲಿ ಸೇವಾ ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಕುಶಾಲನಗರದ ಅಧ್ಯಕ್ಷೆ ಶೋಭಾ ಸತೀಶ್ ತಿಳಿಸಿದ್ದಾರೆ.

ಕುಶಾಲನಗರದ ರೋಟರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 22 ರಿಂದ ಎರಡು ದಿನಗಳ ಕಾಲ ಫಿಲಿಫೈನ್ಸ್‍ನ ಭಾಗಿಯೋ ವಿಶ್ವವಿದ್ಯಾನಿಲಯದಲ್ಲಿ ಕೃತಕ ಕಾಲು ಜೋಡಣಾ ಶಿಬಿರ ನಡೆಯಲಿದ್ದು, ಅಲ್ಲಿನ 100 ಮಂದಿಯನ್ನು ಗುರುತಿಸಿ ಅವರಿಗೆ ಕೃತಕ ಕಾಲುಗಳನ್ನು ನೀಡುವ ಸೇವಾ ಕಾರ್ಯವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸೇವಾ ಕಾರ್ಯಕ್ರಮದಲ್ಲಿ ಕುಶಾಲನಗರ ರೋಟರಿಯ ಎಸ್.ಕೆ. ಸತೀಶ್, ಬಿ. ಪ್ರೇಮಚಂದ್ರನ್, ಕೆ.ಎಂ. ಜೇಕಬ್, ಶಿಬು ಥಾಮಸ್, ಕೆ.ವಿ. ತಿಲಕ್ ತಂಡ ತೆರಳಲಿದೆ ಎಂದು ಮಾಹಿತಿ ನೀಡಿದ ಶೋಭಾ ಸತೀಶ್, ಈ ಕೃತಕ ಕಾಲುಗಳಿಗೆ ತಗಲುವ ವೆಚ್ಚವನ್ನು ಕುಶಾಲನಗರ ರೋಟರಿ ಸಂಸ್ಥೆ ಸದಸ್ಯರು ಭರಿಸಿದ್ದು ಉಳಿದಂತೆ ತಂಡದ ಸದಸ್ಯರು ತಮ್ಮ ಖರ್ಚು ವೆಚ್ಚ ಭರಿಸುವರು ಎಂದು ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ ರೋಟರಿ ಗ್ಲೋಬಲ್ ಗ್ರಾಂಟ್‍ನ ಸೇವಾ ಕಾರ್ಯಕ್ರಮದಡಿಯಲ್ಲಿ 75 ಲಕ್ಷದ 40 ಸಾವಿರ ರೂ.ಗಳ ವೈದ್ಯಕೀಯ ಪೀಠೋಪಕರಣಗಳನ್ನು ಅಶ್ವಿನಿ ಆಸ್ಪತ್ರೆಗೆ ನೀಡಲು ಯೋಜನೆ ರೂಪುಗೊಂಡಿದ್ದು ಈ ತಿಂಗಳ ಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಮಾತನಾಡಿದ ರೋಟರಿ ಪ್ರಮುಖರಾದ ಎಸ್.ಕೆ. ಸತೀಶ್, ಕುಶಾಲನಗರ ರೋಟರಿ ಕಳೆದ 37 ವರ್ಷಗಳಿಂದ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಗ್ರಾಮೀಣ ಮಹಿಳೆಯರಿಗೆ ಟೈಲರಿಂಗ್, ಬ್ಯೂಟಿಷಿ ಯನ್ ತರಬೇತಿ ಯೋಜನೆಯನ್ನು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದೊಂದಿಗೆ ಉಚಿತವಾಗಿ ನಡೆಸಿಕೊಂಡು ಬರಲಾಗಿದೆ. ಚಿಕ್ಲಿಹೊಳೆ ಸರಕಾರಿ ಶಾಲೆಗೆ ಸೋಲಾರ್ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರೋಟರಿ ಕಾರ್ಯದರ್ಶಿ ಸುನಿತಾ ಮಹೇಶ್ ಮಾತನಾಡಿ, ಕಳೆದ ಅಕ್ಟೋಬರ್ 2 ರಂದು ಕುಶಾಲನಗರದ ಸುತ್ತಮುತ್ತಲಿನ 89 ಕ್ಕೂ ಅಧಿಕ ಮಂದಿಗೆ ಕೃತಕ ಕಾಲು ಉಚಿತವಾಗಿ ನೀಡುವ ಯೋಜನೆ ಯಶಸ್ವಿಗೊಂಡಿದೆ. ಕೊಯಮತ್ತೂರು ರೋಟರಿ ಸಂಸ್ಥೆಯ ಸಹಯೋಗ ದೊಂದಿಗೆ ಆಸ್ಟ್ರೇಲಿಯ ದೇಶದ ರೋಟರಿ ಸಂಸ್ಥೆ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆದಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಸಾಲಿನ ಅಧ್ಯಕ್ಷರಾಗಿ ನಿಯೋಜನೆಗೊಂಡ ಸಿ.ಎ. ಮುದ್ದಪ್ಪ ಮಾತನಾಡಿ, ಜುಲೈ 6 ರಂದು ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದಲ್ಲಿ ನಡೆಯಲಿದೆ. ಮುಂದಿನ ಸಾಲಿನಲ್ಲಿ ಹಲವು ಸೇವಾ ಯೋಜನೆಗಳನ್ನು ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು. ಕುಶಾಲನಗರದ ರೋಟರಿ ಹಿರಿಯ ಸದಸ್ಯ ಮಹೇಶ್ ನಾಲ್ವಡೆ ಅವರು ಜೋನಲ್ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸಲಿ ದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಮುಂದಿನ ಸಾಲಿನ ಕಾರ್ಯದರ್ಶಿ ಎನ್.ಜಿ. ಪ್ರಕಾಶ್, ಪ್ರಮುಖರಾದ ಡಾ. ಹರಿ ಶೆಟ್ಟಿ ಇದ್ದರು.