ಚೆಟ್ಟಳ್ಳಿ, ಜೂ. 14: ಸೋಮವಾರಪೇಟೆ ತಾಲೂಕಿನ ಹಳ್ಳಿಗಳಿಗೆ ನೀರಾವರಿಗೆಂದೇ ಚಿಕ್ಲಿಹೊಳೆ ಜಲಾಶಯ ಯೋಜನೆ ಯನ್ನು ಸ್ಥಾಪಿಸಿಯಾದರೂ ಇಲ್ಲಿ ನೂರೆಂಟು ಸಮಸ್ಯೆಗಳು ಎದ್ದು ಕಾಣತೊಡಗಿದೆ. ಇದಕ್ಕೆಲ್ಲ ಇಲ್ಲಿನ ಅಧಿಕಾರಿಗಳ ನಿರ್ಲಕ್ಷವೇ ಕಂಡು ಬರುತ್ತಿದೆ. ಹಾಗಾದರೆ ಈ ಜಲಾಶಯದ ರೋಧನವನ್ನು ಕೇಳುವವರಾರು?

ಕಾವೇರಿ ನದಿಯ ಉಪನದಿ ಯಾದ ಚಿಕ್ಲಿಹೊಳೆ (ಚಿಕ್ಕಹೊಳೆ)ಗೆ ನೀರಾವರಿ ಯೋಜನೆಯಡಿ ರಂಗಸಮುದ್ರ ಗ್ರಾಮದ ಸಮೀಪ ನೀರಿನ ಸಂಗ್ರಹ ಜಲಾಶಯವನ್ನು ನಿರ್ಮಿಸಿ ಏತ ನೀರಾವರಿಯ ಮೂಲಕ ಸೋಮವಾರಪೇಟೆ ತಾಲೂಕಿನ ಸುಮಾರು 2752 ಹೆಕ್ಟೆರ್ ಪ್ರದೇಶಗಳಿಗೆಲ್ಲಾ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಿಕ್ಲಿಹೊಳೆ ಜಲಾಶಯ ಯೋಜನೆಗೆ 1977ರಲ್ಲಿ 340 ಲಕ್ಷ ರೂ.ಗಳಲ್ಲಿ 1978-79ನೇ ಸಾಲಿನಲ್ಲಿ 440 ಮೀ. ಉದ್ದದ ಜಲಾಶಯವನ್ನು ಪ್ರಾರಂಭಿಸ ಲಾಯಿತು. ನಂತರದಲ್ಲಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮೂಲಕ 436 ಹೆಕ್ಟೇರ್ ಪ್ರದೇಶಗಳಿಗೆ ನೀರು ಒದಗಿಸುತ್ತಾ ಬರುತ್ತಿದೆ.

ಅಣೆಕಟ್ಟೆಯ ರಕ್ಷಕರು ಯಾರು?

ಕರ್ನಾಟಕ ಸರಕಾರದ ಉದ್ಯಮ ವಾದ ಕಾವೇರಿ ನೀರಾವರಿ ನಿಗಮ (ನಿ) ಜಲಾಶಯದ ಜವಾಬ್ದಾರಿ ಹೊತ್ತಿದೆ ಎಂಬದಕ್ಕೆ ತುಕ್ಕು ಹಿಡಿದ ನಾಮಫಲಕವೇ ಹೇಳುತ್ತಿದೆ. ಅಣೆಕಟ್ಟೆಯ ವ್ಯವಸ್ಥೆ ನೋಡಿದಾಗ ರಕ್ಷಣೆಯ ಜವಾಬ್ದಾರಿ ಹೊತ್ತವರು ಯಾರು ಇಲ್ಲದಂತಾಗಿದೆ.

ಕೊಡಗಿನಲ್ಲಿ ಮುಂಗಾರು ಪ್ರಾರಂಭವಾಗುವದಕ್ಕಿಂತ ಮೊದಲೇ ಅಣೆಕಟ್ಟೆಯನ್ನು ಸರಿಪಡಿಸಿ ನೀರು ಪೋಲಾಗದಂತೆ ಮುನ್ನೆಚರಿಕೆ ವಹಿಸುವದು ಇಲಾಖೆಯ ಜವಾಬ್ದಾರಿಯಾದರು, ಇನ್ನೂ ಅಧಿಕಾರಿಗಳು ಎಚ್ಚೆತ್ತು ಕೊಂಡಂತೆ ಕಾಣುತ್ತಿಲ್ಲ. ಅಣೆಕಟ್ಟೆಯ ಸುತ್ತಲೆಲ್ಲ ಕಾಡು ಬೆಳೆದರೂ ಯಾರೂ ಇತ್ತ ಕಡೆ ಗಮನಹರಿಸುತ್ತಿಲ್ಲ. ಹಲವು ವರ್ಷಗಳ ಹಿಂದೆಯೇ ಜಲಾಶಯದ ಮೇಲೆ ಎರಡು ಬದಿಗಳಲ್ಲಿದ್ದ ಕಬ್ಬಿಣದ ಸಲಾಕೆಗಳನ್ನು ಹತ್ತೊಯ್ದಿದ್ದು ರಕ್ಷಣೆಯೇ ಇಲ್ಲವಾಗಿದೆ.

ಕಾಲುವೆಯ ಕಾಮಗಾರಿ ನೀರುಪಾಲು

ನೀರು ಕಾಲುವೆಗಳ ಮೂಲಕ ಹರಿದುಹೋಗಲು ವ್ಯವಸ್ಥೆಯನ್ನು ಮಾಡಲಾಗಿದ್ದರೂ ವರ್ಷಕ್ಕೊಮ್ಮೆ ಕಾಲುವೆಗಳ ದುರಸ್ತಿಗಾಗಿ ಟೆಂಡರ್‍ಗಳ ಮೂಲಕ ಕೋಟಿಗಟ್ಟಲೆ ಹಣ ಬಿಡುಗಡೆಯಾಗುತ್ತದೆ. ಇಲ್ಲಿನ ಕಳಪೆ ಕಾಮಗಾರಿಯಿಂದ ಕಾಲುವೆ ಕಾಮಗಾರಿಗಳ ಅವಧಿ ಮುಗಿಯುವ ಮೊದಲೇ ಹಾಳುಬಿದ್ದು ಕಾಲುವೆ ಕಾಮಗಾರಿಯ ಹಣ ಕಾಲುವೆಯ ನೀರಿನ ರಭಸಕ್ಕೆ ಹರಿದು ಹೋದಂತೆ ಕಾಣಬರುತ್ತಿದೆ.

ಗೇಟಿನ ಯಂತ್ರವೇ ಮಾಯ

ಕೊಡಗಿನಲ್ಲಿ ಕೆಲ ದಿನಗಳ ಮಳೆಯಿಂದ ಚಿಕ್ಲಿಹೊಳೆ ಜಲಾಶಯದ ಮಟ್ಟ ಅಲ್ಪಸ್ವಲ್ಪ ಏರತೊಡಗಿದೆ ಮುಂಗಾರು ಬಿತ್ತನೆಗೆ ಸುತ್ತಲಿನ ಹಳ್ಳಿಗಳಿಗೆ ಜಲಾಶಯದ ನೀರನ್ನು ಗೇಟಿನ ಮೂಲಕ ಬಿಡಬೇಕಾಗಿದ್ದು, ಕೆಲ ತಿಂಗಳ ಹಿಂದೆ ಜಲಾಶಯದ ಗೇಟಿನ ಯಂತ್ರ ರಿಪೇರಿ ಎಂದು ಬಿಚ್ಚಿ ಹೊತ್ತೊಯ್ದಿದ್ದವರು ಇನ್ನೂ ತಂದು ಜೋಡಿಸಲಿಲ್ಲ. ಹೊಲ-ಗದ್ದೆಗಳಿಗೆ ನೀರು ಬಿಡಬೇಕೆಂದರೆ ಇಲ್ಲಿ ನೀರು ಬಿಡಬೇಕಾದ ಗೇಟಿನ ಯಂತ್ರವೇ ಇಲ್ಲ.

ರಕ್ಷಕನ ಗೋಳು

ಅಣೆಕಟ್ಟೆಯಲ್ಲಿ ನಿತ್ಯವು ಅದೆಷ್ಟೋ ಪ್ರವಾಸಿಗರು ಹಾಗೂ ಸ್ಥಳೀಯರು ಸುತ್ತಾಡುತ್ತಾ ಆನಂದಿಸುತ್ತಿದ್ದಾರೆ. ನೀರು ಕಂಡೊಡನೆ ನೀರಿನೊಳಕ್ಕೆ ಇಳಿದು ಮೋಜು-ಮಸ್ತಿ ಹೆಚ್ಚಾಗುವದು, ಹಿಂದೆ ನೀರಿನಲ್ಲಿ ಮುಳುಗಿ ಸತ್ತವರ ಉದಾಹರಣೆಯನ್ನು ಈ ಜಲಾಶಯ ನೆನಪಿಸುತ್ತಿದೆ.

ಹೀಗಿರುವಾಗ ಟೆಂಡರ್ ನೀಡಿ ಟೆಂಡರಾದರು ಇನ್ಯಾರನ್ನೋ ದಿನಕೂಲಿ ನೌಕರನ್ನಾಗಿ ನೇಮಿಸಿಕೊಂಡು ತೀರಾ ಕಡಿಮೆ ಸಂಬಳ ನೀಡಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಕಾವಲು ಕಾಯುವ ಪರಿಸ್ಥಿತಿ ಎದುರಾದರೂ ಅಲ್ಲದೆ ಪ್ರತಿ ತಿಂಗಳು ಸಂಬಳವೂ ಆಗದೆ 3-4 ತಿಂಗಳವರೆಗೂ ಕಾಯುವ ಪರಿಸ್ಥಿತಿಯಿದೆ. ಹೀಗಾದರೆ ಊರನ್ನು ಕಾಯುವವನು ತನ್ನ ಹೆಂಡತಿ ಮಕ್ಕಳನ್ನು ಸಾಕುವದೇಗೆ? ಅಧಿಕಾರಿಗಳೇ ಒಮ್ಮೆ ಯೋಚಿಸಿ. ಕಾವಲು ಕಾಯುವವನಿಗೆ ಧರ್ಮಕ್ಕೆ ಕಾಡನ್ನು ಕಡಿದು ಶುಚಿಗೊಳಿಸುವ ಕಾಯಕಬೇಕೇ?

ಮೀನುಗಳ ಸಾವು

ಪ್ರತೀ ವರ್ಷ ಖಾಸಗಿಯವರಿಗೆ ಜಲಾಶಯದ ಮೀನನ್ನು ಟೆಂಡರ್ ನೀಡಲಾಗುತ್ತಿದೆ. ಈ ವರ್ಷ ದೊಡ್ಡ ದೊಡ್ಡ ಮಿನುಗಳು ಸಾಯುತ್ತಿವೆ. ಬಿಸಿಲ ತಾಪಕ್ಕೆ ಸಾಯುವದೋ ಅಥವಾ ನೀರೇನಾದರೂ ಕಲುಷಿತ ಗೊಳ್ಳುತ್ತಿವೆಯೋ ಎಂಬ ಬಗ್ಗೆ ಟೆಂಡರ್‍ದಾರರಿಗೆ ಆತಂಕ ಪ್ರಾರಂಭವಾಗಿದೆ. ಈ ಬಗ್ಗೆ ಇಲಾಖೆ ಕೂಡ ತಲೆ ಕೆಡಿಸಿ ಕೊಂಡಂತಿಲ್ಲ. ಮೀನು ಕಳ್ಳರ ಹಾವಳಿಯನ್ನು ತಡೆಯಲು ಟೆಂಡರ್‍ದಾರರು ಹಗಲಿರುಳು ಇಲ್ಲಿ ಕಾಯುತ್ತಿದ್ದಾರೆ.

ಏನೇ ಆದರು ಕೊಡಗಿನ ಹಳ್ಳಿಗಳಿಗೆ ನೀರನ್ನು ಬಳಸಲು ಹಲವು ವರ್ಷಗಳ ಹಿಂದೆ ಸರಕಾರ ಕೋಟಿಗಟ್ಟಲೆ ವ್ಯಯಿಸಿ ನಿರ್ಮಿಸಿದ ಜಲಾಶಯವನ್ನು ಉಳಿಸಲು ಜವಾಬ್ದಾರಿ ಹೊತ್ತ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕಾಗಿದೆ. ಶೀಘ್ರದಲ್ಲೇ ಜಲಾಶಯಕ್ಕೊಂದು ಮುಕ್ತಿ ಕರುಣಿಸುವ ಕೆಲಸ ಆಗ ಬೇಕಿದೆ.

- ಪುತ್ತರಿರ ಕರುಣ್ ಕಾಳಯ್ಯ