ಮಡಿಕೇರಿ, ಆ. 22: ಅದೊಂದು ಅಪರೂಪದ ಕ್ಷಣವಾಗಿತ್ತು. ಕುಗ್ರಾಮದಲ್ಲಿರುವ ಪುಟ್ಟ ಶಾಲೆಯ ಕೀರ್ತಿಯನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪಸರಿಸಲು ಕಾರಣಕರ್ತರಾದ ಶಿಕ್ಷಕರಿಗೆ ಗ್ರಾಮಸ್ಥರಿಂದ ಹೃದಯಸ್ಪರ್ಶಿ ಕಾರ್ಯಕ್ರಮ ಅದಾಗಿತ್ತು.

ಇಲ್ಲಿಗೆ ಸನಿಹದ ಗಾಳಿಬೀಡು ಸರಕಾರಿ ಪ್ರೌಢಶಾಲೆ ಸತತವಾಗಿ ಮೂರು ವರ್ಷ ಹತ್ತನೇ ತರಗತಿಯಲ್ಲಿ ಶೇ. 100ರಷ್ಟು ಫಲಿತಾಂಶ ಗಳಿಸಿದೆ. ಈ ಸಂಭ್ರಮ ಗ್ರಾಮದಲ್ಲಿ ಮನೆ ಮಾಡಿತ್ತು. ಈ ಸಂಭ್ರಮಕ್ಕೆ ಕಾರಣಕರ್ತರಾದ ಶಿಕ್ಷಕರುಗಳನ್ನು ಗ್ರಾಮದ ಶಕ್ತಿ ಪುರುಷರ ಸ್ವಸಹಾಯ ಸಂಘ ಹಾಗೂ ಗ್ರಾಮಸ್ಥರು ಸೇರಿ ಅಭಿನಂದನಾ ಪೂರ್ವಕವಾಗಿ ಸನ್ಮಾನಿಸಿದರು. ಶಾಲೆಯ ಶಿಕ್ಷಕಿಯರಾದ ಆರ್. ಕಾವೇರಿ, ಹೆಚ್.ಎನ್. ಭಾರತಿ, ಎನ್. ಸುಮ, ಕೆ.ಎಂ. ಕರುಣ, ಹೆಚ್.ವಿ. ತೇಜ ಹಾಗೂ ದೈಹಿಕ ಶಿಕ್ಷಕ ಎಂ. ರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ ಮಾತನಾಡಿ, ಕುಗ್ರಾಮವೆಂದೇ ಹೇಳಲಾಗುವ ಗಾಳಿಬೀಡು ಪ್ರೌಢಶಾಲೆ ಸತತವಾಗಿ ಮೂರು ವರ್ಷ ಶೇ. 100ರಷ್ಟು ಸಾಧನೆ ಮಾಡಲು ಕಾರಣಕರ್ತರಾದ ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು. ಇತ್ತೀಚೆಗೆ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಕಂಡುಬರುತ್ತಿದ್ದು, ಹಾಗಾಗದಂತೆ ನೋಡಿಕೊಳ್ಳಬೇಕು. ಶಾಲೆಗೆ ಸಂಬಂಧಿಸಿದಂತೆ ನೀರು, ಇನ್ನಿತರ ವ್ಯವಸ್ಥೆಗಳು ಬೇಕಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ಹೇಳಿದರಲ್ಲದೆ, ಸ್ಪಂದಿಸುವ ಭರವಸೆ ನೀಡಿದರು. ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಕೋಳುಮುಡಿಯನ ಅನಂತ್ ಕುಮಾರ್ ಮಾತನಾಡಿ, ಹಿಂದೆ ಗ್ರಾಮದಿಂದ ಪ್ರೌಢಶಿಕ್ಷಣಕ್ಕೆ ದೂರದ ಪಟ್ಟಣಕ್ಕೆ ತೆರಳಲು ವ್ಯವಸ್ಥೆಗಳಿಲ್ಲದ ಸಂದರ್ಭದಲ್ಲಿ ನಮ್ಮ ಹಿರಿಯರ ಮುಂದಾಲೋಚನೆಯೊಂದಿಗೆ ನಿರ್ಮಿಸಿರುವ ಶಾಲೆಯನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು. ಸಾಧನೆ ಮಾಡಲು ಕಾರಣಕರ್ತರಾದ ಶಿಕ್ಷಕರನ್ನು ಅಭಿನಂದಿಸಿದರಲ್ಲದೆ, ಶಾಲೆಯ ಬೆಳವಣಿಗೆಗೆ ಗ್ರಾಮಸ್ಥರ ಸಹಕಾರ ಕೂಡ ಅಗತ್ಯವೆಂದರು.

ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ‘ಶಕ್ತಿ' ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ಯಾವದೇ ಜಾತಿ, ಮತ, ಭೇದ- ಭಾವ, ಮೇಲು - ಕೀಳು ಭಾವನೆಯಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬೆರೆಯುವ ಏಕೈಕ ಕ್ಷೇತ್ರವೆಂದರೆ ವಿದ್ಯಾ ದೇಗುಲಗಳು, ಕತ್ತಲೆಯಿಂದ ಕೂಡಿರುವ ಮುಗ್ಧ ಮಕ್ಕಳ ಮನಸ್ಸನ್ನು ತಿದ್ದಿ, ತೀಡಿ, ಉತ್ತಮ ಪ್ರಜೆಯನ್ನಾಗಿ ರೂಪಿಸುವವರೇ ಶಿಕ್ಷಕರು. ವಿದ್ಯಾದೇಗುಲದ ಬಗ್ಗೆ ಗೌರವ ಭಾವನೆಯಿರಬೇಕೆಂದರು. ತಾಯಿಯ ನಂತರ ಎರಡನೇ ಸ್ಥಾನದಲ್ಲಿರುವ ಗುರುಗಳನ್ನು ಗೌರವಿಸುವದರೊಂದಿಗೆ ಹಿರಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರಲ್ಲದೆ, ಸರಕಾರಿ ಶಾಲೆಗಳೆಂದು ಮೂಗು ಮುರಿಯದೆ ಸರಕಾರಿ ಶಾಲೆಯಲ್ಲಿ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಾದರಿಯಾಗಬೇಕೆಂದು ಹೇಳಿದರು. ಶಕ್ತಿ ಪುರುಷರ ಸ್ವಸಹಾಯ ಸಂಘದ ಅಧ್ಯಕ್ಷ ಕೆ.ಪಿ. ಲಿಂಗರಾಜು, ಸದಸ್ಯ ಹಾಗೂ ದಾನಿ ಟಿ.ಆರ್. ವಾಸು ಹಿತ ನುಡಿಗಳನ್ನಾಡಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ರಾಣಿ ಮುತ್ತಣ್ಣ, ಸದಸ್ಯರುಗಳಾದ ಎ.ಟಿ. ಕುಮಾರಿ, ಜಯಲಕ್ಷ್ಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೀಲಾ, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹೆಚ್.ಜಿ. ಬೋಜಕ್ಕಿ ಇನ್ನಿತರರಿದ್ದರು. ವಿದ್ಯಾರ್ಥಿನಿ ವರಿಷ್ಮಾ ಪ್ರಾರ್ಥಿಸಿದರೆ, ಗ್ರಾ.ಪಂ. ಸದಸ್ಯ ಸುಭಾಷ್ ಆಳ್ವ ಸ್ವಾಗತಿಸಿದರು. ಕೆ.ಪಿ. ಗಣಪತಿ ಪ್ರಾಸ್ತಾವಿಕ ನುಡಿಗಳನ್ನಾಡಿ, ವಂದಿಸಿದರು. ಬಳಿಕ ಎಲ್ಲರಿಗೂ ಸಹಭೋಜನ ಏರ್ಪಡಿಸಲಾಗಿತ್ತು.