ಮಡಿಕೇರಿ, ಡಿ.31: 2016 ಅಂತ್ಯಗೊಂಡಿದೆ. 2017 ಆರಂಭವಾಗಿದೆ. ಪ್ರತಿಬಾರಿಯಂತೆ ಹೊಸ ವರುಷವನ್ನು ಜನತೆ ಹರುಷದಿಂದ ಬರಮಾಡಿ ಕೊಂಡರು. ವರುಷದ ಕೊನೆಯ ದಿನವಾದ ತಾ. 31ರ ರಾತ್ರಿಯಲ್ಲಿ ಕತ್ತಲನ್ನು ನಾಚಿಸುವಂತೆ ಫೈರ್ ಕ್ಯಾಂಪ್, ಹಾಡು, ಕುಣಿತ, ಮೋಜು ಮಸ್ತಿಯೊಂದಿಗೆ 2016ಕ್ಕೆ ವಿದಾಯ ಹೇಳಿ 2017ನ್ನು ಸಂಭ್ರಮದಿಂದ ಸ್ವಾಗತಿಸಿದರು.

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ‘ನ್ಯೂ ಇಯರ್' ಸಡಗರ ಬಲು ಜೋರಾಗಿತ್ತು. ಮಡಿಕೇರಿಯ ಬಹುಪಾಲು ಹೋಂ ಸ್ಟೇ, ಲಾಡ್ಜ್‍ಗಳು, ಪ್ರವಾಸಿ ತಾಣಗಳು ಪ್ರವಾಸಿಗರಿಂದ ಭರ್ತಿಯಾಗಿತ್ತು. ಸಂಜೆ ವೇಳೆಗೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರದ್ದೇ ದರ್ಬಾರ್! ಬೆಳಗ್ಗಿನಿಂದಲೂ ನಗರ ವ್ಯಾಪ್ತಿಯಲ್ಲಿ ಸ್ಥಳೀಯ ವಾಹನಗಳಿಗಿಂತ ಹೊರಭಾಗದ ವಾಹನಗಳೇ ಹೆಚ್ಚಾಗಿ ಕಂಡು ಬಂದವು. ಜಿಲ್ಲೆಯ ಹಲವೆಡೆ ಇದೇ ಚಿತ್ರಣ ಕಂಡು ಬಂತು. ವಾರದ ಕೊನೆಯ ದಿನ ಮಡಿಕೇರಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವದು ಸಾಮಾನ್ಯವಾದರೂ ಈ ಬಾರಿ ಹೊಸವರ್ಷವು ಕೂಡ ವಾರದ ಕೊನೆಯಲ್ಲಿ ಬಂದ ಕಾರಣ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು.

ರಾತ್ರಿ ವೇಳೆ ವಾಹನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರ ಸಾಹಸ ಪಡಬೇಕಾಯಿತು. ಹೋಂ ಸ್ಟೇ ಲಾಡ್ಜ್‍ಗಳಲ್ಲಂತೂ ಕೇಕೆ ಚಪ್ಪಾಳೆಗಳು ಮುಗಿಲು ಮುಟ್ಟಿದ್ದವು. ಮಹಿಳೆಯರು, ಪುರುಷರು, ಮಕ್ಕಳೆನ್ನದೆ ಎಲ್ಲರೂ ಒಟ್ಟಾಗಿ ಪರಸ್ಪರ ಆಲಂಗಿಸಿ ಹೊಸ ವರುಷದ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವೆಡೆ ಆಗಸದಲ್ಲಿ ಪಟಾಕಿಗಳ ಚಿತ್ತಾರ ಆವರಿಸಿತ್ತು. ರಸ್ತೆಗಳಲ್ಲಿ, ತೋಟಗಳಲ್ಲಿ ಕೂಡ ಯುವ ಪಡೆ ಹೊಸ ವರ್ಷಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಬಗೆಬಗೆಯ ತಿನಿಸುಗಳು, ವಿಧ ವಿಧ ಪಾನೀಯದ ರಂಗಿನೊಂದಿಗೆ ನಡುರಾತ್ರಿ ವೇಳೆ ‘ಹ್ಯಾಪಿ ನ್ಯೂ ಇಯರ್’ ಎಂಬ ಘೋಷಣೆ ಎಲ್ಲೆಡೆ ಮಾರ್ದನಿಸಿತು.

ಮಡಿಕೇರಿ ವ್ಯಾಪ್ತಿಯ ಬಹುತೇಕ ಎಲ್ಲಾ ಹೋಂ ಸ್ಟೇಗಳು ಭರ್ತಿಯಾಗಿದ್ದು, ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಮಂಜಿನ ನಗರಿಯ ಹೋಂ ಸ್ಟೇಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮವನ್ನು ಸವಿದರು ಎಂದು ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಮದನ್ ಸೋಮಣ್ಣ ತಿಳಿಸಿದರು.

ಮಡಿಕೇರಿ ಹೊರತುಪಡಿಸಿ ಜಿಲ್ಲೆಯಲ್ಲಿರುವ ಹಲವಾರು ಪ್ರವಾಸಿ ತಾಣಗಳು, ಹೋಂ ಸ್ಟೇ ಲಾಡ್ಜ್‍ಗಳು ಪ್ರವಾಸಿಗರಿಂದ ತುಂಬಿಹೋಗಿದ್ದವು.

ಸ್ಥಳೀಯ ಪ್ರವಾಸಿಗರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದೆದ್ದರು. ಒಟ್ಟಿನಲ್ಲಿ ಹೊಸ ವರುಷದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.