ಸೋಮವಾರಪೇಟೆ, ಅ.23: ಇತಿಹಾಸ ಪ್ರಸಿದ್ಧ ತಾಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾದ, ಹಚ್ಚ ಹಸಿರಿನ ವನಸಿರಿ, ಬೆಟ್ಟ- ಗುಡ್ಡಗಳ ಸಾಲಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಶ್ರೀ ಕ್ಷೇತ್ರ ಹೊನ್ನಮ್ಮನ ಕೆರೆ ಆವರಣದಲ್ಲಿಂದು ಕನ್ನಡ ಕವನಗಳ ಕಂಪು ಪಸರಿಸಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹೊನ್ನಮ್ಮನ ಕೆರೆ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳು ತಮ್ಮ ಸುತ್ತಮುತ್ತಲಿನ ಪರಿಸರ, ಸಾಮಾಜಿಕ ವಿದ್ಯಮಾನಗಳು, ಹೆಣ್ಣು ಮಕ್ಕಳು ಅನುಭವಿಸುವ ಸಂಕಷ್ಟಗಳ ಬಗ್ಗೆ ತಮ್ಮ ಕವನಗಳ ಮೂಲಕ ಸಮಾಜದ ಕಣ್ತೆರೆಸುವ ಪ್ರಯತ್ನ ಮಾಡಿದರು.

ಕವಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕವಿಗಳು ಸಂಸ್ಕøತಿಯ ವಕ್ತಾರರು ಎಂದು ಬಣ್ಣಿಸಿದರು.

ನಾಡಿನ ಸಂಸ್ಕøತಿ, ಕಲೆ, ಆಚಾರ -ವಿಚಾರಗಳು, ಹಬ್ಬ -ಹರಿದಿನಗಳು ಹಾಗೂ ಪ್ರಕೃತಿಯನ್ನು ಕವಿಗಳು ತಮ್ಮದೇ ಧಾಟಿಯಲ್ಲಿ ಜನರಿಗೆ ಮನಮುಟ್ಟುವ ರೀತಿಯಲ್ಲಿ ವರ್ಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನ ಭವ್ಯ ಪರಂಪರೆ, ಸಂಸ್ಕøತಿ ಉಳಿಯಲು ಕವಿಗಳು ಮತ್ತು ಸಾಹಿತಿಗಳ ಕೊಡುಗೆ ಅಪಾರ ಎಂದರು.

ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ತೇಲಪಂಡ ಕವನ್ ಕಾರ್ಯಪ್ಪ ಮಾತನಾಡಿ, ಭಾಷಾ ಶ್ರೀಮಂತಿಕೆಯೇ ಜಿಲ್ಲೆಯ ಹೆಮ್ಮೆಯ ಆಸ್ತಿ. ಇಲ್ಲಿ ಎಲ್ಲಾ ಭಾಷೆಗಳ ಸಾಹಿತ್ಯವೂ ಸಮೃದ್ಧಿಯಾಗಿ ಬೆಳೆದಿದೆ. ಕೊಡಗಿನ ಮಣ್ಣಿನ ಸತ್ವವೇ ಇಲ್ಲಿನ ಕವಿಗಳಿಗೆ ಕವನಗಳನ್ನು ಬರೆಯಲು ಪ್ರೇರೇಪಿಸುತ್ತದೆ. ಕವಿಗಳು ಬೆಳೆದರೆ ಸಾಹಿತ್ಯ ಬೆಳೆದಂತೆ. ಕವಿಯು ತನ್ನದೇ ಆದ ಕಲ್ಪನಾಲೋಕದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭ ವಸ್ತುನಿಷ್ಠತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಲೇಖಕಿ ಶಿವದೇವಿ ಅವನೀಶ್ಚಂದ್ರ ಮಾತನಾಡಿ, ಮಹಿಳೆಯರು ಕವನವನ್ನು ರಚಿಸುವಾಗ ಸಮಾಜದಲ್ಲಿರುವ ಅವ್ಯವಸ್ಥೆ, ಭ್ರಷ್ಟಾಚಾರ, ಮೂಢನಂಬಿಕೆಗಳನ್ನು ತಮ್ಮ ಬರಹಗಳ ಮೂಲಕ ಆಕ್ರೋಶ ವ್ಯಕ್ತಪಡಿಸುವದರೊಂದಿಗೆ ಒಗ್ಗಟ್ಟಾಗಿ ಹೋರಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಸಾಮಾಜಿಕ ಕ್ರಾಂತಿಯ ಕವನಗಳು ಇಂದಿನ ಅಗತ್ಯತೆಯಾಗಿದೆ ಎಂದರು.

ಕವಿಗೋಷ್ಠಿಯಲ್ಲಿ ಕೆ.ವಿ.ಪುಟ್ಟಣ ಆಚಾರ್ಯ ತಮ್ಮ ‘ಸಮಾಜಕ್ಕೆ ಕತ್ತಲಾದವರು’ ಎಂಬ ಕವಿತೆಯಲ್ಲಿ ಸಮಾಜದಲ್ಲಿರುವ ಜಾತಿ ಪದ್ಧತಿ, ಬದ್ಧತೆಯಿಲ್ಲದ ಜನಪ್ರತಿನಿಧಿಗಳು, ನಿರುದ್ಯೋಗ, ಯುವಕರು ಎದುರಿಸುತ್ತಿರುವ ಭವಣೆಯ ಬಗ್ಗೆ ಬೆಳಕು ಚೆಲ್ಲಿದರು.

ಕಾಂಚನ ಮಧು ತಮ್ಮ ಸತ್ಯದ ಅನ್ವೇಷಣೆ ಎಂಬ ಕವನದಲ್ಲಿ ಹೆಣ್ಣುಮಕ್ಕಳು ಸಮಾಜದಲ್ಲಿ ಅನುಭವಿಸುತ್ತಿರುವ ಮೂಕವೇದನೆ ಯನ್ನು ಶಬ್ದಗಳ ಸಾಲಿನಲ್ಲಿ ವರ್ಣಿಸಿದರು. ಹೆಣ್ಣಿನ ಮುಗ್ಧತೆಯನ್ನು ಪ್ರತಿಬಿಂಬಿಸುವ ‘ನಮ್ಮ ಕರುನಾಡ ಹೆಣ್ಣಿನ ಸಂಸ್ಕøತಿ’ ಎಂಬ ಕವನದಲ್ಲಿ ರೂಪ ಸುರೇಶ್ ತಿಳಿಸಿದರು. ಡಿ.ಎಂ. ಕುಮಾರಪ್ಪ, ಕೆ.ಪಿ.ಸುದರ್ಶನ್ ಮತ್ತು ನ.ಲ. ವಿಜಯ ಹೊನ್ನಮ್ಮ ಕ್ಷೇತ್ರದ ತ್ಯಾಗ ಬಲಿದಾನಗಳು, ಕ್ಷೇತ್ರದ ಮಹತ್ವ, ರಾಜಕೀಯ ಸ್ಥಿತ್ಯಂಥರ, ಧಾರ್ಮಿಕ ಹಿನ್ನೆಲೆಗಳನ್ನು ತಮ್ಮ ಕವನಗಳ ಮೂಲಕ ತಿಳಿಸಿದರು.

ಸಮಾಜದಲ್ಲಿ ನೊಂದ ಹೆಣ್ಣು ಅನುಭವಿಸುವ ಕಷ್ಟ -ಕಾರ್ಪಣ್ಯಗಳ ಕುರಿತು ಸುಶೀಲ ಹಾನಗಲ್ ತಮ್ಮ ಕವನದ ಮೂಲಕ ಹೇಳಿದರು. ಎನ್.ಆರ್.ನಾಗೇಶ್ ರಚಿಸಿದ ಏಳು ಸುತ್ತಿನ ಮಲ್ಲಿಗೆ, ರುಬಿನಾ ಅವರ ‘ಪಾಪಪ್ರಜ್ಞೆ ಕಾಡುವದಿಲ್ಲವೆ’?, ಎಚ್.ಪಿ. ಪ್ರೇಮಕುಮಾರ್ ಅವರ ಶ್ರೀ ಕಾವೇರಿ ಮಾತೆ, ಜಲಕಾಳಪ್ಪ ಅವರು ‘ದಾನ ಮಾಡಿ ಬಿಡಿ’, ಶರ್ಮಿಳಾ ರಮೇಶ್ ಅವರ ‘ಕನ್ನಡಿಯೊಳಗಿನ ಗಂಟು’, ದೀಪಿಕ ಸುದರ್ಶನ್ ಅವರ ‘ಬದುಕಿನ ಓಟ’, ಕುಡೆಕಲ್ ಸಂತೋಷ್ ಅವರು ವಾಚಿಸಿದ ‘ಮಹಿಳೆಯ ಅಂತರಾಳದ ನೋವು’ ಹಾ.ತಿ.ಜಯಪ್ರಕಾಶ್ ಅವರ ಚುಟುಕು ಕವನ ಸೇರಿದಂತೆ, ಬಿ.ಸಿ.ಶಂಕರಯ್ಯ, ಸಂದೇಶ್ ಜೋಸೆಫ್ ಡಿಸೋಜ, ಸುನಿತಾ ಲೋಕೇಶ್, ಅನಿತಾ ಶುಭಕರ್, ಭಾಗ್ಯ ಭವೇರಪ್ಪ, ರಾಣಿ ರವೀಂದ್ರ, ಎಲ್.ಎಂ.ಪ್ರೇಮ, ಎಚ್.ಬಿ.ಜಯಮ್ಮ ಅವರುಗಳು ಕವನ ವಾಚಿಸಿದರು.

ಚಂದ್ರಿಕಾ ಗಣಪತಿ, ಎಸ್.ಡಿ.ವಿಜೇತ್, ಆಶಾ, ಸಿಂಚನಾ ಇವರುಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ತಾಲೂಕು ಕ.ಸಾ.ಪ. ಘಟಕದ ಅಧ್ಯಕ್ಷ ಎಚ್.ಜೆ.ಜವರಪ್ಪ, ದೊಡ್ಡಮಳ್ತೆ ಗ್ರಾಮ ಸಮಿತಿ ಅಧ್ಯಕ್ಷ ಡಿ.ಜೆ.ಚಿಣ್ಣಪ್ಪ, ಕ.ಸಾ.ಪ. ಗೌರವ ಕೋಶಾಧ್ಯಕ್ಷ ಡಿ.ಪಿ.ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.