ಕುಶಾಲನಗರ, ಜು. 19: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮತ್ತು ಮೂಲ ಸೌಕರ್ಯ ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ್ಲಾ ಹೊಟೇಲ್ಗಳಿಗೆ ಧಾಳಿ ಮಾಡಿ ಶುಚಿತ್ವ ಕುರಿತು ಪರಿಶೀಲನೆ ನಡೆಸಿ ದಂಡ ವಿಧಿಸಿದ ಘಟನೆ ನಡೆದಿದೆ.
ಪಂಚಾಯಿತಿ ಅಧ್ಯಕ್ಷೆ ಭಾರತಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಮೇಲ್ವಿಚಾರಕ ಹೆಚ್.ಜಿ. ದೇವರಾಜ್ ನೇತೃತ್ವದಲ್ಲಿ ಹೊಟೇಲ್ಗಳಲ್ಲಿ ಕೈಗೊಂಡಿರುವ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭ ಶುಚಿತ್ವ ಕಾಪಾಡದ ಹಿನ್ನೆಲೆಯಲ್ಲಿ ಸುಮಾರು 20 ಹೊಟೇಲ್ಗಳಿಗೆ ತಲಾ ರೂ. 2 ಸಾವಿರದಂತೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.
ಹೊಟೇಲ್ಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಕಾವೇರಿ ನದಿಯ ದಂಡೆ ಮೇಲೆ ಹಾಕುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕಾವೇರಿ ನದಿ ಪಾತ್ರಗಳಿಗೆ ತೆರಳಿ ಪರಿಶೀಲನೆ ನಡೆಸಿತು.
ನದಿ ಪಾತ್ರದಲ್ಲಿ ಕಸ ಹಾಗೂ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡದಂತೆ ಎಲ್ಲಾ ಹೊಟೇಲ್ಗಳಿಗೂ ಎಚ್ಚರಿಕೆಯ ನೋಟಿಸ್ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಗುಡ್ಡೆಹೊಸೂರು ಸುತ್ತಮುತ್ತ ಪ್ರವಾಸಿ ಕೇಂದ್ರಗಳಿದ್ದು, ಇಲ್ಲಿಗೆ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆಹಾರ ದೊರೆಯಬೇಕು.
ಈ ನಿಟ್ಟಿನಲ್ಲಿ ಹೊಟೇಲ್ಗಳ ಮೇಲೆ ಧಾಳಿ ಮಾಡಿ ಶುಚಿತ್ವ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದೇವೆ. ಅಲ್ಲದೆ ಆಹಾರ ವಸ್ತುಗಳ ಬೆಲೆ ಪಟ್ಟಿಗಳನ್ನು ಪ್ರದರ್ಶಿಸುವಂತೆ ಸೂಚನೆ ನೀಡಿದ್ದೇವೆ ಎಂದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿ, ಶುಚಿತ್ವ ಕಾಯ್ದುಕೊಳ್ಳದ ಹೊಟೇಲ್ಗಳ ಲೈಸನ್ಸ್ ಅನ್ನು ರದ್ದುಪಡಿಸಲಾಗುವದು ಎಂದು ಎಚ್ಚರಿಕೆ ನೀಡಲಾಗಿದೆ.
ಅಲ್ಲದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿ ಭೀಮಯ್ಯ, ಬಿ.ಟಿ. ಪ್ರಸನ್ನ, ಗುಡ್ಡೆಮನೆ ರವಿ, ಶಶಿಕುಮಾರ್, ಬಸವರಾಜು, ಬಸವನಹಳ್ಳಿ ಸಂಚಾರಿ ಗಿರಿಜನ ಆಸ್ಪತ್ರೆ ಮೇಲ್ವಿಚಾರಕ ಕೆ.ಎಸ್. ಪುಟ್ಟಸ್ವಾಮಿ, ಆರೋಗ್ಯ ಸಹಾಯಕ ಸಂಜಯ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು