ಕೂಡಿಗೆ, ಸೆ. 28: ಸರಕಾರ ಹಾಗೂ ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಹಾಗೂ ಹೈನುಗಾರಿಕೆಯನ್ನು ಹೆಚ್ಚಿಸಿಕೊಳ್ಳಲು ರೈತರಿಗೆ ವಿವಿಧ ರೀತಿಯ ಸಾಲ ಸೌಲಭ್ಯ, ಹಾಲಿನ ಪೋತ್ಸಾಹ ಧನ ಸೇರಿದಂತೆ ಹೆಚ್ಚು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಇದನ್ನು ರೈತರು ಸದ್ಭಳಿಸಿಕೊಳ್ಳಬೇಕೆಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಟಿ. ಅರುಣ್‍ಕುಮಾರ್ ಹೇಳಿದರು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಲ್ಲುಬೆಟ್ಟ (ಭುವನಗುರಿ) ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ಹಾಸನ ಹಾಲು ಒಕ್ಕೂಟದಿಂದ ಎರಡು ಗೋದಾಮು ನಿರ್ಮಿಸಲು ಅನುದಾನ ನೀಡುವದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿ, ಹೈನುಗಾರಿಕೆಗೆ ಸರಕಾರ ಸಹಕಾರ ನೀಡುವದರ ಜೊತೆಗೆ ರೈತರ ಪ್ರಗತಿಗೆ ಹಾಗೂ ಪಶು ಆಹಾರಗಳನ್ನು ಇನ್ನೂ ಉತ್ತಮಗೊಳಿಸಿ ಹೈನುಗಾರಿಕೆಯ ಅಭಿವೃದ್ಧಿ ನಮ್ಮ ಸುಖ ಸಮೃದ್ಧಿ ಯಾಗಲು ಒಕ್ಕೂಟದ ಆಡಳಿತ ಮಂಡಳಿಯವರು ಸಹಕಾರಿಗಳಾಗ ಬೇಕೆಂದರು. ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಸಂಘದ ಜಾಗಕ್ಕೆ ತಡೆಗೋಡೆ ನಿರ್ಮಿಸಲು ಅನುದಾನ ನೀಡಲಾಗುವದು ಎಂದರು. ಕಾರ್ಯಕ್ರಮದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ರೈತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್ ವಹಿಸಿದ್ದರು.

ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯರುಗಳಾದ ಟಿ.ಕೆ. ವಿಶ್ವನಾಥ್, ಟಿ.ಜಿ. ಮಂಜಯ್ಯ, ಧನ್ಯಕೃಷ್ಣ, ಸಂಘದ ಉಪಾಧ್ಯಕ್ಷ ಜಗದೀಶ್, ನಿರ್ದೇಶಕರುಗಳಾದ ನಾಗೇಶ್, ಜೋಯಪ್ಪ, ನಾಗರಾಜು, ಅಪ್ಪಾಜಿ, ಲಕ್ಷ್ಮಮ್ಮ, ಅನ್ನಮ್ಮ ಬಿಜು, ಕಾರ್ಯದರ್ಶಿ ಹೆಚ್.ಎಂ. ಬಸವರಾಜ್ ಉಪಸ್ಥಿತರಿದ್ದರು. ಬಸವರಾಜು ಸ್ವಾಗತಿಸಿ, ವಂದಿಸಿದರು.