ಮಡಿಕೇರಿ, ನ.8 : ಟಿಪ್ಪು ಜಯಂತಿ ಕುರಿತು ಪರ, ವಿರೋಧ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿ ಯಾಗುತ್ತಿದ್ದು, ಜಿಲ್ಲೆಯ ಪ್ರಜ್ಞಾವಂತರು ಶಾಂತಿ ಮತ್ತು ಸಂಯಮವನ್ನು ಕಾಯ್ದುಕೊಳ್ಳ ಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ನ ಜಿಲ್ಲಾ ಘಟಕ ಮನವಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹಮಾನ್ ಜಯಂತಿ ಆಚರಣೆಗಳು ಸರಕಾರಕ್ಕೆ ಬಿಟ್ಟ ವಿಚಾರವಾಗಿದ್ದು, ಪರಸ್ಪರ ಸಂಶಯದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಸಮಾಜದಲ್ಲಿ ಸೃಷ್ಟಿಯಾಗ ಬಾರದೆಂದರು. ಟಿಪ್ಪು ಜಯಂತಿಯನ್ನು ನೆಪವಾಗಿರಿಸಿ ಕೊಂಡು ಪರ, ವಿರೋಧ ಹೇಳಿಕೆಗಳನ್ನು ನೀಡುತ್ತಿರುವವರು ವಿವಾದವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳದೆ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಲು ಆದ್ಯತೆ ನೀಡಬೇಕೆಂದರು. ಪರ, ವಿರೋಧ ಹೇಳಿಕೆಗಳು ಮತ್ತು ಪ್ರತಿಭಟ ನೆಗಳು ಕೋಮು ಸೌಹಾರ್ದತೆಗೆ ಹೆಸರಾಗಿರುವ ಕೊಡಗಿನ ಕೀರ್ತಿಗೆ ಕಳಂಕ ತರಬಾರದು ಎಂದು ತಿಳಿಸಿದ ಅವರು ಜಿಲ್ಲೆಯ ಜನರು ಶಾಂತಿಯನ್ನು ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಚಾಲಕ ಸಿ.ಹೆಚ್.ಅಫ್ಸರ್ ಮಾತನಾಡಿ ತಾ.10 ರಂದು ಸರಕಾರ ಆಚರಿಸುತ್ತಿರುವ ಟಿಪ್ಪು ಜಯಂತಿ ಸಂದರ್ಭ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಜಕೀಯ ಪಕ್ಷಗಳು ಜನರ ಭಾವನೆಗಳನ್ನು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಬಳಸಿ ಕೊಳ್ಳದೆ ನಿಸ್ವಾರ್ಥ ಧೋರಣೆಯನ್ನು ಪ್ರದರ್ಶಿಸ ಬೇಕಾಗುತ್ತದೆ. ಜಿಲ್ಲೆಯನ್ನು ಸಾಕಷ್ಟು ಸಮಸ್ಯೆಗಳು ಕಾಡುತ್ತಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕಾಗಿದೆ. ದೇಶದ ಇತಿಹಾಸದ ಬಗ್ಗೆ ವ್ಯಾಪಕ ಚರ್ಚೆಯ ಅಗತ್ಯವಿದ್ದು, ಇದಕ್ಕಿರುವ ವೇದಿಕೆಯನ್ನು ಕಲ್ಪಿಸುವ ಮೂಲಕ ಮುಂದಿನ ಪೀಳಿಗೆಗೆ ಇತಿಹಾಸದ ನೈಜಾಂಶವನ್ನು ತಿಳಿಸುವ ಕಾರ್ಯವಾಗಬೇಕೆಂದ ಸಿ.ಹೆಚ್. ಅಫ್ಸರ್ ಜಿಲ್ಲೆಯ ಜನ ಸಂಯಮವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.
ಎಸ್ಐಓ ಘಟಕದ ರಾಷ್ಟ್ರೀಯ ಕಾರ್ಯದರ್ಶಿ ಎಂ.ವೈ.ತೌಸೀಫ್ ಅಹಮ್ಮದ್ ಮಾತನಾಡಿ ಭಾರತದ ಇತಿಹಾಸದಲ್ಲಿ ಯಾವದೇ ರಾಜನು ತನ್ನ ರಾಜ್ಯವನ್ನು ವಿಸ್ತರಿಸುವದಕ್ಕಾಗಿ ಯುದ್ಧ ಮಾಡಿದ್ದಾರೆಯೇ ಹೊರತು ಧರ್ಮಕ್ಕಾಗಿ ಅಲ್ಲವೆಂದು ಸ್ಪಷ್ಟಪಡಿಸಿದರು. ಆದರೆ ಇಂದು ಎಲ್ಲಾ ವಿಚಾರಗಳಿಗೂ ಧರ್ಮದ ಬಣ್ಣ ಬಳಿಯುತ್ತಿರುವದು ವಿಷಾದಕರ ವೆಂದರು. ಇತಿಹಾಸವನ್ನು ಧರ್ಮದ ಆಧಾರದಲ್ಲಿ ವಿಭಜಿಸದೆ ಪೌರಾಣಿಕ, ಮಧ್ಯಕಾಲಿನ ಮತ್ತು ಆಧುನಿಕ ಎಂದು ವಿಭಜಿಸುವ ಅಗತ್ಯವಿದ್ದು, ವಿಕೃತ ಇತಿಹಾಸದ ಬುನಾದಿಯಲ್ಲಿ ಆರೋಗ್ಯಕರ ಸಮಾಜದ ನಿರ್ಮಾಣ ಅಸಾಧ್ಯವೆಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ನ ಸ್ಥಾನೀಯ ಅಧ್ಯಕ್ಷ ಜಿ.ಹೆಚ್.ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.