ಕೂಡಿಗೆ, ಅ. 20: ಕೊಡಗು ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ ಸೋಮವಾರಪೇಟೆ ತಾಲೂಕು, ಕುಶಾಲನಗರ ಹೋಬಳಿ ಸಹಯೋಗದಲ್ಲಿ 2016-17ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮವು ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರೈತರು ಲಾಭದಾಯಕ ಬೆಳೆಯನ್ನು ಬೆಳೆಯಲು ಕೃಷಿ ಇಲಾಖೆಯ ಸಂಪೂರ್ಣ ಮಾಹಿತಿಯನ್ನು ಪಡೆದು, ಕೃಷಿಯ ತಾಂತ್ರಿಕ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದು ತನ್ನ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರವು ಜಿಲ್ಲೆಯ ಎರಡು ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಿದೆ. ಇದೇ ಮಾದರಿಯಲ್ಲಿ ಸೋಮವಾರಪೇಟೆ ತಾಲೂಕಿಗೆ ಅತಿ ಹೆಚ್ಚು ಮಳೆ ಬಿದ್ದಿದೆ ಎಂಬ ತಪ್ಪು ಅಂಕಿ ಅಂಶಗಳ ಪ್ರಕಾರ ಈ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ರೈತರನ್ನೊಳಗೊಂಡಂತೆ ತಾಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಬರಗಾಲ ಪೀಡಿತ ತಾಲೂಕು ಎಂದು ನಿರ್ಣಯ ಮಾಡುವದರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ರೈತರೊಂದಿಗೆ ಹೋರಾಟ ಮಾಡಲಾಗುವದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ಕೃಷಿ ಇಲಾಖೆಯ ಯೋಜನೆಗಳು ಅಪಾರವಾಗಿವೆ. ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೂತನ ವೈಜ್ಞಾನಿಕ ಯೋಜನೆಗಳ ಮೂಲಕ ಬೇಸಾಯ ಮಾಡಿ ತನ್ನ ಬದುಕನ್ನು ಹಸನಗೊಳಿಸಿಕೊಳ್ಳಲು ಇಂತಹ ಕೃಷಿ ಅಭಿಯಾನದ ಮಾಹಿತಿ ಮುಖ್ಯ ಎಂದರು.

ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆ. ರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಉತ್ಪಾದನೆಯ ಅಂತರ ಖುಷ್ಕಿ ಪ್ರದೇಶದಲ್ಲಿ ಹೆಚ್ಚು ಬೇಸಾಯ ಮಾಡಲು ದೇಶದ ಜನಸಂಖ್ಯೆಯು ಹೆಚ್ಚುತ್ತಾ, ಹಿಂದಿನ ಜನಸಂಖ್ಯೆಯ ಆಧಾರದನುಗುಣ ಇದ್ದ ಉತ್ಪಾದನೆಗೂ ಈಗಿನ ಉತ್ಪಾದನೆಗೂ ವ್ಯತ್ಯಾಸವಿದ್ದರು ಉತ್ಪಾದನಾ ಸಾಗುವಳಿಯ ವ್ಯವಸಾಯ ಕ್ಷೇತ್ರ ಕಡಿಮೆಯಾಗುತ್ತಿದೆ. ದೇಶದಲ್ಲಿ 133 ಕೋಟಿ ಜನಸಂಖ್ಯೆಗೆ 250 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿದ್ದರೂ ದೇಶದ ಜನಸಂಖ್ಯೆಗೆ ಅನುಗುಣವಾಗಿ, ಹೊಸ ಯೋಜನೆ, ಹಸಿರು ಕ್ರಾಂತಿಯ ಮೂಲಕ ಉತ್ಪಾದನ ಅಂತರವನ್ನು ಹೆಚ್ಚಿಸಲಾಗುತ್ತಿದೆ. ಆದರೆ ಜನಸಂಖ್ಯೆ ಬೆಳೆದಂತೆ ಕೃಷಿ ಭೂಮಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಬಳಸುತ್ತಿರುವ ಹಿನ್ನೆಲೆಯಲ್ಲಿ ಭೂಮಿಯ ವಿಸೀರ್ಣವು ಕಡಿಮೆಯಾಗುತ್ತಿದೆ. ಇವುಗಳ ಅಂತರವನ್ನು ಸರಿದೂಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಜನಜಾಗೃತಿ ಮೂಡಿಸಿ ಖುಷ್ಕಿ ಪ್ರದೇಶದಲ್ಲಿ ಅಧಿಕ ಬೆಳೆ ಬರುವಂತಹ ಬೆಳೆಗಳನ್ನು ಬೆಳೆಯಲಿ. ಇಂತಹ ಅಭಿಯಾನಗಳ ಮೂಲಕ ರೈತರಿಗೆ ಗ್ರಾಮ ಮಟ್ಟದಲ್ಲಿ ತಿಳಿಸಲು ಯೋಜನೆಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯರಾದ ಎಂ.ಬಿ.ಸುನೀತ, ತಾ.ಪಂ. ಸದಸ್ಯರಾದ ಜಯಣ್ಣ, ಗಣೇಶ್, ಸುಹಾದ್, ಪುಷ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎನ್.ಪಿ.ಪೊನ್ನಪ್ಪ, ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್.ರಾಜಶೇಖರ್, ತಾಂತ್ರಿಕ ಅಧಿಕಾರಿ. ಎಸ್.ಮುಕುಂದ, ರೈತರ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಿ.ಸಿ.ಪೂಣಚ್ಚ, ಹೆಬ್ಬಾಲೆ ಗ್ರಾಮ ಪಂಚಾಯ್ತಿ ಶಿವನಂಜಪ್ಪ ಆಗಮಿಸಿದ್ದರು.

ವಸ್ತು ಪ್ರದರ್ಶನದಲ್ಲಿ ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ನೂತನ ತಾಂತ್ರಿಕ ಯೋಜನೆಯ ಹೊಸ ಹೊಸ ಯಂತ್ರಗಳ ಪ್ರದರ್ಶನವು ನಡೆದವು.

ನಂತರ ನಡೆದ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ.ಪ್ರಭಾಕರ್, ಕೊಡಗು ಜಿಲ್ಲಾ ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಮುಂಡಂಡ ನಾಣಯ್ಯ, ಮಡಿಕೇರಿಯ ಹಾರ್ಟಿ ಕ್ಲೀನಿಕ್ ವಿಷಯ ತಜ್ಞ ಬಿ.ಸಿ.ನಾಚಪ್ಪ ರೈತರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭ ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡಾ.ಎಸ್.ಮುಕುಂದ ಸ್ವಾಗತಿಸಿ, ವಂದಿಸಿದರು.