ಕೂಡಿಗೆ, ನ. 30: ಇಲ್ಲಿಗೆ ಸಮೀಪದ ಹೆಬ್ಬಾಲೆ ಬನಶಂಕರಿ ಅಮ್ಮನ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ಉದ್ಘಾಟಿಸಿದರು.ಹೆಬ್ಬಾಲೆ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆದ 19ನೇ ವರ್ಷದ ಎತ್ತಿನ ಗಾಡಿ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗಳು ಜನಮನ ರಂಜಿಸಿತು.

ಈ ಓಟದ ಸ್ಪರ್ಧೆಯಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ರೈತರು ಸೇರಿದಂತೆ ಪಿರಿಯಾಪಟ್ಟಣ, ಬೆಟ್ಟದಪುರ, ಹುಣಸೂರು, ಸಾಲಿಗ್ರ್ರಾಮ ಮೈಸೂರು, ಚಿಕ್ಕಮಂಗಳೂರು ಹಾಗೂ ಹಾಸನ ಜಿಲ್ಲೆಗಳ ಜನತೆ ಭಾಗವಹಿಸಿದ್ದರು.

ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ಎತ್ತಿನ ಗಾಡಿ ಮಾಲೀಕರಿಗೆ ಕ್ರಮವಾಗಿ 8 ಗ್ರಾಂ ಚಿನ್ನ ಹಾಗೂ 6 ಗ್ರಾಂ.ಚಿನ್ನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಸಾಲಿಗ್ರಾಮ ತಂಡದ ಕೀರ್ತನ್ ಪ್ರಥಮ, ಹರ್ಷಿತ್ ದ್ವಿತೀಯ ಸ್ಥಾನ ಪಡೆದರು.

ಜಾತ್ರೆಯ ಅಂಗವಾಗಿ ಕ್ರಿಕೆಟ್, ಥ್ರೋಬಾಲ್, ವಾಲಿಬಾಲ್, ರಂಗೋಲಿ ಸ್ಪರ್ಧೆ, ಗೃಹಾಲಂಕರ ಸ್ಪರ್ಧೆ ಇನ್ನಿತರ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು.