ಮಡಿಕೇರಿ, ಡಿ. 25: ಹೆಚ್.ಐ.ವಿ. ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಹೆಚ್‍ಐವಿ ಏಡ್ಸ್ ಪೀಡಿತರಿಗೆ ವಿವಿಧ ಸಾಮಾಜಿಕ ಸವಲತ್ತು ಸಿಗುವಂತೆ ಮಾಡಲು ವಿವಿಧ ಇಲಾಖೆಗಳ ಪಾತ್ರ ಮತ್ತಿತರ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ನಡೆಯಿತು.
ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಅಪಾಯಕಾರಿ ಕಾಯಿಲೆ ವಿರುದ್ಧ ಹೋರಾಟ ನಿರಂತರವಾಗಿ ನಡೆಯಬೇಕಿದೆ ಹಾಗೂ ಇಂತಹ ಕಾಯಿಲೆಗೆ ತುತ್ತಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಇಲಾಖೆಗಳು ಹಾಗೂ ಖಾಸಗಿ ಸಂಘ-ಸಂಸ್ಥೆಗಳು ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರ ಣಾಧಿಕಾರಿ ಡಾ. ಶಿವಕುಮಾರ್ ಹೆಚ್.ಐ.ವಿ. ಏಡ್ಸ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಪಾತ್ರ, ನಿಯಂತ್ರಣ ಸೇವೆಗಳು, ಚಿಕಿತ್ಸಾ ಸೌಲಭ್ಯಗಳು ಹಾಗೂ ಹೆಚ್.ಐ.ವಿ. ಏಡ್ಸ್ ಸೋಂಕನ್ನು ಕಡಿಮೆ ಮಾಡಲು ಇರುವ ಸಾಮಾಜಿಕ ಸವಲತ್ತುಗಳು ಹಾಗೂ ಎಚ್.ಐ.ವಿ-ಏಡ್ಸ್ ಹರಡುವಿಕೆಯಿಂದ ಅಗುವ ತೊಂದರೆಗಳ ಬಗ್ಗೆ ವಿವರಿಸಿದರು.
ಹೆಚ್.ಐ.ವಿ. ಸೋಂಕಿತರಿಗೆ ಜಿಲ್ಲೆಯಲ್ಲಿ ಸಾಕಷ್ಟು ಸೇವೆಗಳು ಲಭ್ಯವಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯಡಿ ವಿಶೇಷ ಪಾಲನಾ ಯೋಜನೆ, ಓ.ಡಿ.ಪಿ. ಸ್ನೇಹಾಶ್ರಯ ಸಮಿತಿಯಿಂದ ಪೌಷ್ಟಿಕ ಆಹಾರ, ಶೈಕ್ಷಣಿಕ, ಸಾಮಾಜಿಕ ಬೆಂಬಲ, ಐ.ಸಿ.ಟಿ.ಸಿ. ಹಾಗೂ ಎ.ಆರ್.ಟಿ. ಕೇಂದ್ರಗಳಲ್ಲಿ ಉಚಿತ ಹೆಚ್.ಐ.ವಿ. ಪರೀಕ್ಷೆ ಮತ್ತು ಮಾಹಿತಿ ಹಾಗೂ ಚಿಕಿತ್ಸೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅಂತ್ಯೋದಯ ಹಾಗೂ ಬಿ.ಪಿ.ಎಲ್. ಕಾರ್ಡ್ ಸೌಲಭ್ಯ, ರಾಜೀವ್ ಗಾಂಧಿ ವಸತಿ ಯೋಜನೆ ಹಾಗೂ ಖಾಸಗಿ ಸಂಸ್ಥೆಗಳ ವತಿಯಿಂದ ಉಚಿತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ತಿಳಿದು ಅಗತ್ಯ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ಶಾಲಾ-ಕಾಲೇಜು ಮಟ್ಟದಲ್ಲಿ ರೆಡ್ ರಿಬ್ಬನ್ ಕ್ಲಬ್ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮುಖಾಂತರ ಶಾಲೆಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಆಗಬೇಕು ಎಂದರು.
ಜಿಲ್ಲೆಯಲ್ಲಿ 2016ರಲ್ಲಿ ಸಾಮಾನ್ಯ ವರ್ಗದವರಲ್ಲಿ 15,681 ಜನರನ್ನು ಪರೀಕ್ಷಿಸಲಾಗಿದ್ದು, 129 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ ಹಾಗೂ ಗರ್ಭಿಣಿಯರಲ್ಲಿ 8,758 ರಲ್ಲಿ 9 ಹೆಚ್.ಐ.ವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 38 ಐ.ಸಿ.ಟಿ.ಸಿ. ಕೇಂದ್ರಗಳು, ಒಂದು ಎ.ಆರ್.ಟಿ. ಕೇಂದ್ರ, ಮೂರು ಲಿಂಕ್ ಎ.ಆರ್.ಟಿ. ಕೇಂದ್ರಗಳು, ನಾಲ್ಕು ಇ.ಐ.ಡಿ. ಕೇಂದ್ರಗಳು, ನಾಲ್ಕು ಸ್ವಯಂ ಸೇವಾ ಸಂಸ್ಥೆಗಳು ಹೆಚ್.ಐ.ವಿ. ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಡಿ.ವೈ.ಎಸ್. ಪಿ. ಛಬ್ಬಿ, ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್, ಆಹಾರ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ. ಸ್ವಾಮಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ ಇತರರು ಇದ್ದರು.