*ಗೋಣಿಕೊಪ್ಪಲು, ಸೆ. 22: ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ 5 ತಿಂಗಳಿನಿಂದ 9 ಜಾನುವಾರುಗಳನ್ನು ಬಲಿ ತೆಗೆದುಕೊಂಡಿರುವ ಹುಲಿಯನ್ನು ಸೆರೆ ಹಿಡಿಯಲು ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆಯ ವಿಶೇಷ ಕಾರ್ಯಪಡೆ ಸನ್ನದ್ಧವಾಗಿದೆ.
ಬಾಳೆಲೆ ದೇವನೂರಿನ ಲಕ್ಷ್ಮಣ ತೀರ್ಥ ನದಿ ದಡದಲ್ಲಿ ಹುಲಿ ಸೆರೆಹಿಡಿಯುವ ಬೋನಿಟ್ಟು ಅದರ ಹೆಜ್ಜೆಜಾಡನ್ನು ಹಿಡಿದು ಪರಿಶೀಲಿಸುತ್ತಿದ್ದಾರೆ. 120 ಜನರ ವಿಶೇಷ ಕಾರ್ಯಪಡೆ ತಂಡ ಕೈಯಲ್ಲಿ ಬಂದೂಕು, ಬಲೆ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹಿಡಿದು ಹುಲಿ ಓಡಾಡುವ ಜಾಗದಲ್ಲೆಲ್ಲಾ ಅಲೆದಾಡುತ್ತಿದ್ದಾರೆ. ಜತೆಗೆ ಅಲ್ಲಲ್ಲೆ ಸಿಸಿ ಕ್ಯಾಮೆರಾ ಇಟ್ಟು ಹುಲಿ ಓಡಾಡುವ ಜಾಡನ್ನು ಪರಿಶೀಲಿಸಲಾಗುತ್ತಿದೆ.
ಸ್ಥಳಕ್ಕೆ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕ ಮಣಿಕಂಠ, ಎಸಿಎಫ್ ಬೆಳ್ಳಿಯಪ್ಪ, ಕಲ್ಲಳ್ಳ ಆರ್‍ಎಫ್‍ಒ ಶಿವರಾಂ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಮಂಗಳವಾರ ಹುಲಿ ಧಾಳಿಯಿಂದ ಎತ್ತು ಕಳೆದುಕೊಂಡ ಈರಪ್ಪ ಅವರಿಗೆ ರೂ. 20 ಸಾವಿರ ಪರಿಹಾರ ಧನವನ್ನು ಕೊಡಲಾಯಿತು.
ಬಳಿಕ ಮಾತನಾಡಿದ ಮಣಿಕಂಠ ಅವರು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಅವರ ಹೋರಾಟ ಫಲವಾಗಿ ಜಾನುವಾರು ಕಳೆದುಕೊಂಡವರಿಗೆ ಇದ್ದ ರೂ. 10 ಸಾವಿರ ಪರಿಹಾರ ಧನವನ್ನು
ರೂ. 20 ಸಾವಿರಕ್ಕೆ ಏರಿಸಲಾಗಿದೆ. ಹುಲಿ ಸೆರೆ ಹಿಡಿಯಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಸೌಕರ್ಯ ನೀಡಲು ಅಡ್ಡಿಯಿಲ್ಲ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯವಾಸಿ ಗಿರಿಜನರಿಗೆ ಎಲ್ಲಾ ಬಗೆಯ ಮೂಲ ಸೌಕರ್ಯಗಳನ್ನು ನೀಡಲು ಅರಣ್ಯ ಇಲಾಖೆ ಸಹಕರಿಸಲಿದೆ. ಇದಕ್ಕೆ ಯಾವದೇ ಅಡ್ಡಿಪಡಿಸುವದಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು, ತಾಲೂಕು ಪಂಚಾಯಿತಿ ಸದಸ್ಯೆ ಸುನಿತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ಅಚ್ಯುತ, ಸುಶೀಲಾ, ಮುಖಂಡರಾದ ಶ್ರೀಕಂಠಪ್ಪ, ರಿವಿನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.