ಗೋಣಿಕೊಪ್ಪಲು, ಜ.21: ಬಾಳೆಲೆ-ದೇವನೂರು ಗ್ರಾಮದ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ಆದೇಂಗಡ ತಾರಾ ಅಯ್ಯಮ್ಮ ಅವರ ಲೈನ್ಮನೆಯಲ್ಲಿದ್ದ ಕಾರ್ಮಿಕ ಬೊಳ್ಳ ಅಲಿಯಾಸ್ ಕರಿಯ ಎಂಬಾತನ ಮೇಲೆ ಶುಕ್ರವಾರ ಬೆಳಗ್ಗಿನ ಜಾವ ಹುಲಿಯೊಂದು ಧಾಳಿ ಮಾಡಿದ್ದು, ಇದೀಗ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆಸ್ಪತ್ರೆ ವೈದ್ಯ ಡಾ. ಮೋಹನ್ ಜಿ. ಕಾಕೋಳ ಅವರು ತಲೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿರುವದಾಗಿ ಮೂಲಗಳು ತಿಳಿಸಿವೆ. ಸತತ 7 ಗಂಟೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ತಲೆಯ ಭಾಗಕ್ಕೆ ಸುಮಾರು 28 ಹೊಲಿಗೆ ಹಾಕಲಾಗಿದೆ. ಮೆದುಳು ಭಾಗಕ್ಕೆ ಅದೃಷ್ಟವಶಾತ್ ಹಾನಿ ಸಂಭವಿಸಲಿಲ್ಲ ಎನ್ನಲಾಗಿದೆ. ಹೀಗಿದ್ದೂ ಗಾಯಾಳುವಿಗೆ ಉತ್ತಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದೂ ಹೇಳಲಾಗುತ್ತಿದೆ.
ಬೆಳಗ್ಗಿನ ಜಾವ ನಸುಕಿನಲ್ಲಿ ಗಾಯಾಳು ಬೊಳ್ಳ ನಾಯಿ ಬೊಗಳುವ ಶಬ್ಧದಿಂದ ಎಚ್ಚೆತ್ತು, ಲೈನ್ ಮನೆಯ ಮುಂಭಾಗ ವಿದ್ಯುತ್ ದೀಪ ಬೆಳಗಿಸಿ ನೋಡಲಾಗಿ ಮೊದಲಿಗೆ ಏನೂ ಗೋಚರವಾಗಲಿಲ್ಲ ಎನ್ನಲಾಗಿದೆ. ಚಳಿಯಿಂದ ರಕ್ಷಣೆ ಹೊಂದಲು ತಲೆಯ ಮೇಲೆ ಕಂಬಳಿ ಹೊದಿಕೆಯೊಂದಿಗೆ ಮನೆ ಎದುರಿಗೆ ಕಟ್ಟಿಗೆ ಜೋಡಿಸಿ ಹಾಕಿದ್ದ ಬೆಂಕಿಯ ಎದುರು ಚಳಿ ಕಾಯಿಸಿಕೊಳ್ಳುತ್ತಿದ್ದ ಸಂದರ್ಭ ಹುಲಿ ಬೊಳ್ಳನ ಮೇಲೆ ಎರಗಿದ ಘಟನೆ ನಡೆದಿದೆ. ಬೊಳ್ಳನ ತಲೆ ಭಾಗಕ್ಕೆ ತನ್ನ
(ಮೊದಲ ಪುಟದಿಂದ) ಪಂಜದಿಂದ ಧಾಳಿ ಮಾಡಿದ ಸಂದರ್ಭ ಹುಲಿಯ ಉಗುರು ಕಂಬಳಿಗೆ ಸಿಲುಕಿಕೊಂಡಿತೆನ್ನಲಾಗಿದೆ. ಇದರಿಂದ ವಿಚಲಿತಗೊಂಡ ಹುಲಿರಾಯ ಕಂಬಳಿಯೊಂದಿಗೆ ಭಯಭೀತಗೊಂಡು ಕಾಲ್ಕಿತ್ತಿದೆ. ಅನತಿದೂರದಲ್ಲಿ ಕಂಬಳಿಯನ್ನು ಅದೇಗೋ ಬಿಡಿಸಿಕೊಂಡು ಕಾಡಿನಲ್ಲಿ ಮರೆಯಾಗಿದ್ದ ಘಟನೆ ನಡೆದಿತ್ತು. ಇತ್ತ ಸರ್ಕಾರಿ 108 ವಾಹನದಲ್ಲಿ ಗಾಯಾಳು ಬೊಳ್ಳನನ್ನು ಮೊದಲಿಗೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ತೀವ್ರ ರಕ್ತ ಸ್ರಾವವಾಗುತ್ತಿದ್ದ ತಲೆ ಭಾಗಕ್ಕೆ ಪ್ರಥಮ ಚಿಕಿತ್ಸೆ ನೀಡಿ ಮೈಸೂರು ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು.
‘ದ್ರೋನ್’ ಕಣ್ಣಿಗೆ ಬೀಳದ ಹುಲಿರಾಯ
ಕಾರ್ಮಿಕನ ಮೇಲೆರಗಿದ ಹುಲಿಸೆರೆಗೆ ಇಂದು ಬಾಳೆಲೆ ದೇವನೂರು, ಲಕ್ಷಣ ತೀರ್ಥ ಸರಹದ್ದು ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಲ್ಲಳ್ಳ ವನ್ಯಜೀವಿ ವಲಯದ ನೀರ್ಕಟ್ಟೆ ಕೆರೆ ವ್ಯಾಪ್ತಿಯಲ್ಲಿಯೂ ಅರಣ್ಯ ಇಲಾಖೆ ತಂಡ ವ್ಯಾಪಕ ಶೋಧಕಾರ್ಯ ನಡೆಸಿತ್ತಾದರೂ ಹುಲಿ ಸುಳಿವು ಸಿಗಲಿಲ್ಲ. ಇದೇ ಪ್ರಥಮ ಬಾರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಹುಲಿಪತ್ತೆ ಕಾರ್ಯ ಇಂದು ನಡೆಯಿತು.ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಇವಿಐ (ಇಕೋ ವಾಲಂಟೀರ್ಸ್ ಇಂಡಿಯಾ) ತಜ್ಞರ ತಂಡ ಸುನಿಲ್ ಬಬರ್ವಾಲ್ ನೇತೃತ್ವದಲ್ಲಿ ಇಂದು 7-8 ಬಾರಿ ದ್ರೋನ್ ಮೂಲಕ 10 ಕಿ.ಮೀ.ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದರೂ ಹುಲಿಯ ಇರುವು ಪತ್ತೆಯಾಗಿಲ್ಲ. ಹುಲಿ ಹೆಜ್ಜೆಯ ಜಾಡನ್ನು ಹಿಡಿದೂ ಹುಡುಕಾಟ ನಡೆಸಲಾಗುತ್ತಿದೆ. ದ್ರೋನ್ ತಂತ್ರಜ್ಞಾನದ ಪ್ರಕಾರ 1 ಕಿ.ಮೀ. ಎತ್ತರದಲ್ಲಿ ಹಾರಾಟ ಹಾಗೂ ಸುಮಾರು ಒಂದೂವರೆ ಕಿ.ಮೀ.ದೂರ ಮಾತ್ರ ಒಂದು ಬಾರಿಗೆ ಹುಡುಕಾಟ ಸಾಧ್ಯ. ಇಷ್ಟೂ ಅವಧಿ ಕ್ಯಾಮೆರಾ ಎಲ್ಲವನ್ನೂ ರೆಕಾರ್ಡಿಂಗ್ ಮಾಡುತ್ತಾ ಸಾಗುತ್ತದೆ. ಅತ್ಯಾಧುನಿಕ 4ಕೆ ಕ್ಯಾಮೆರಾ ಅಳವಡಿಸಲಾಗಿದ್ದು 2000 ಎಕ್ಸ್ ಜೂಮ್ ಮೂಲಕ ಯಾವದೇ ಕಾಡುಪ್ರಾಣಿ ಅಥವಾ ಮಾನವನ ಚಲನವಲನಗಳನ್ನು ಇದು ಸ್ಪಷ್ಟವಾಗಿ ಸೆರೆಹಿಡಿಯುತ್ತೆ ಎನ್ನಲಾಗಿದೆ. ಹುಲಿಯ ಜಾಡು ಸಿಗುವವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕ್ಕಾಟಿರ ಜಯ, ನಾಗರಹೊಳೆ ಪ್ರಬಾರ ಎಸಿಎಫ್ ಪ್ರಸನ್ನಕುಮಾರ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ನಡೆದಿದ್ದು ಘಟನೆ ನಡೆದ ತಾರಾ ಅಯ್ಯಮ್ಮ ಅವರ ಕಾಫಿತೋಟ, ದೇವನೂರು ವ್ಯಾಪ್ತಿಯ ಲಕ್ಷ್ಮಣ ತೀರ್ಥ ನದಿ ತಟ, ಕುರುಚಲು ಕಾಡುಗಳು, ನೀರ್ಕಟ್ಟೆ ಕೆರೆ ಇತ್ಯಾದಿ ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ತಾರಾ ಅಯ್ಯಮ್ಮ ಅವರ ಕಾಫಿ ತೋಟ ಹಾಗೂ ಲಕ್ಷಣ ತೀರ್ಥ ನದಿ ಸಮೀಪ ಹುಲಿ ಸೆರೆಗೆ ಎರಡು ಬೋನನ್ನೂ ಅಳವಡಿಸಲಾಗಿದೆ. ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ಹುಲಿಯ ಚಲನ ವಲನ ಪತ್ತೆಗೆ ಇಂದು ಒಟ್ಟು 14 ಕ್ಯಾಮೆರಾಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ಇದು ರಾತ್ರಿಯ ವೇಳೆ ಹುಲಿ ಓಡಾಟ ನಡೆಸಿದ್ದಲ್ಲಿ ಖಚಿತ ಮಾಹಿತಿಯನ್ನು ನೀಡಲಿದೆ.
ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು, ಕೃಷ್ಣ, ದ್ರೋಣರನ್ನು ಕರೆಸಲಾಗಿದ್ದು ನೀರ್ಕಟ್ಟೆ ವ್ಯಾಪ್ತಿಯಲ್ಲಿ ಶೋಧ ಕಾರ್ಯವನ್ನೂ ಇಂದು ನಡೆಸಲಾಯಿತು. ವನ್ಯಜೀವಿ ವೈದ್ಯರಾದ ಡಾ. ಉಮಾಶಂಕರ್, ಡಾ. ನಾಗರಾಜ್ ಹಾಗೂ ಮೈಸೂರು ಮೃಗಾಲಯದ ವೈದ್ಯ ಡಾ. ಮದನ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಗಾಯಾಳು ಹುಲಿಯ ಜಾಡನ್ನು ಕಂಡು ಹಿಡಿಯಲು ಶತಪ್ರಯತ್ನ ಮಾಡುತ್ತಿದ್ದಾರೆ.
ಹುಣಸೂರು ವನ್ಯಜೀವಿ ಎಸಿಎಫ್ ಪ್ರಸನ್ನಕುಮಾರಿ ಇದೀಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪ್ರಬಾರ ಎಸಿಎಫ್ ಆಗಿ ಕರ್ತವ್ಯದಲ್ಲಿದ್ದು, ಸ್ಥಳದಲ್ಲಿ ತಿತಿಮತಿ ವಲಯಾರಣ್ಯಾಧಿಕಾರಿ ಗೋಪಾಲ್, ಆನೆಚೌಕೂರು ವಲಯಾರಣ್ಯಾಧಿಕಾರಿ ಕಿರಣ್ಕುಮಾರ್, ಕಲ್ಲಳ ವಲಯಾರಣ್ಯಾಧಿಕಾರಿ ಶಿವಕುಮಾರ್, ನೂತನ ವಲಯಾರಣ್ಯಾಧಿಕಾರಿ ಪೆÇನ್ನಪ್ಪ ಒಳಗೊಂಡಂತೆ ಸುಮಾರು 80 ಮಂದಿ ಕಾರ್ಯಾಚರಣೆ ತಂಡದಲ್ಲಿದ್ದು ತೀವ್ರ ಶೋಧ ಕಾರ್ಯ ನಡೆದಿದೆ. ಡಬ್ಲ್ಯುಟಿ ಓ (ವೈಲ್ಡ್ ಲೈಫ್ ಟೃಸ್ಟ್) ಇಂಡಿಯಾದ ಡಾ. ಶಾಂತನು ಅವರು ಸ್ಥಳದಲ್ಲಿದ್ದಾರೆ.
ಎಸ್ಟಿಪಿಎಫ್ ಪಡೆ, ಪೆÇನ್ನಂಪೇಟೆ ಪೆÇಲೀಸರೂ ಕಾರ್ಯಾಚರಣೆ ತಂಡದಲ್ಲಿದ್ದು ಮುಂದಿನ ಮೂರು-ನಾಲ್ಕು ದಿನ ಹುಲಿ ಪತ್ತೆಗಾಗಿ ಶೋಧಕಾರ್ಯ ನಡೆಯಲಿದೆ ಎನ್ನಲಾಗಿದೆ.
ಹಸು ನಾಪತ್ತೆ!
ಕಾಫಿ ಬೆಳೆಗಾರ ತಾರಾ ಅಯ್ಯಮ್ಮ ಅವರಿಗೆ ಒಟ್ಟು 25 ಜಾನುವಾರುಗಳಿದ್ದು ಕಳೆದ 5 ದಿನಗಳಿಂದ ಸೀತಾ ಹೆಸರಿನ ಹಸುವೊಂದು ನಾಪತ್ತೆಯಾಗಿರುವದಾಗಿ ಇಂದು ‘ಶಕ್ತಿ’ಗೆ ತಿಳಿಸಿದ್ದಾರೆ. ಲೈನ್ ಮನೆಯ ಬೊಳ್ಳನ ಮನೆಯ ಹಿಂಭಾಗವೇ ದನದ ಕೊಟ್ಟಿಗೆ ಇದ್ದು 24 ರಾಸುಗಳು ಅಲ್ಲಿದ್ದವು ಎನ್ನಲಾಗಿದೆ. ಕೊಟ್ಟಿಗೆಗೆ ಧಾಳಿ ಮಾಡಲು ಹೊಂಚುಹಾಕಿದ ಹುಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ವಿದ್ಯುತ್ ದೀಪ ಹಾಕಿದ್ದು ಹಾಗೂ ಕೂಗಾಟದಿಂದ ಬೆದರಿ ಬೊಳ್ಳನ ಮೇಲೆ ಹುಲಿ ಧಾಳಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಸಂಕೇತ್ಪೂವಯ್ಯ ಸಹಕಾರ
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಗೆ ತೆರಳಬೇಕಿದ್ದ ಕೊಡಗು ಜೆಡಿಎಸ್ ಅಧ್ಯಕ್ಷ ಸಂಕೇತ್ಪೂವಯ್ಯ ಅವರು ಇಂದು ಮೈಸೂರು ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳು ಬೊಳ್ಳನಿಗೆ ಉತ್ತಮ ಚಿಕಿತ್ಸೆ ಸಾಧ್ಯವಿಲ್ಲ. ಇಂದು ಬೆಳಗ್ಗಿನಿಂದಲೂ ಗಾಯಾಳು ಯೋಗಕ್ಷೇಮ ವಿಚಾರಿಸಲು ಯಾವದೇ ಸಂಬಂಧಿಸಿದ ಅರಣ್ಯ ಇಲಾಖಾಧಿಕಾರಿಗಳು ಬರಲಿಲ್ಲ. ಉತ್ತಮ ಖಾಸಗಿ ಆಸ್ಪತ್ರೆಗೆ ಬೊಳ್ಳನನ್ನು ಸೇರಿಸಿ, ಸರ್ಕಾರ ಮಟ್ಟದಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ಬೇಗನೆ ಗುಣಮುಖನಾಗಲು ಸಾಧ್ಯ ಎಂದು ತಿಳಿಸಿದ್ದಾರೆ.
ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹಾಗೂ ಹುಲಿ ಧಾಳಿ ಬಗ್ಗೆ ಮುನ್ಸೂಚನೆ ಕೊಡುತ್ತಲೇ ಬಂದಿದ್ದರೂ, ಅರಣ್ಯ ಸಚಿವರ, ಮುಖ್ಯಮಂತ್ರಿ ಭೇಟಿಗೆ ಒತ್ತಾಯಿಸುತ್ತಾ ಬಂದಿದ್ದರೂ ಸರ್ಕಾರ ಮಟ್ಟದಲ್ಲಿ ಸ್ಪಂದನ ಸಿಗುತ್ತಿಲ್ಲ. ತಾರಾ ಅಯ್ಯಮ್ಮ ಅವರ ಹಸುವನ್ನು ಹುಲಿ ಕಬಳಿಸಿರುವ ಸಾಧ್ಯತೆ ಇದ್ದು, ಇತ್ತ ಈವರೆಗೆ 26 ಮಂದಿ ಕಾರ್ಮಿಕರು ಕೊಡಗಿನಲ್ಲಿ ಕಾಡಾನೆಯಿಂದ ಸಾವಿಗೀಡಾಗಿದ್ದಾರೆ ಹಾಗೂ 28 ಜಾನುವಾರು ಹುಲಿ ಧಾಳಿಗೆ ಸಿಲುಕಿದ್ದು ಸೂಕ್ತ ಪರಿಹಾರ ಒದಗಿಸುವಲ್ಲಿಯೂ ಅರಣ್ಯ ಇಲಾಖೆ ಎಡವಿದೆ ಎಂದು ಆರೋಪಿಸಿದ್ದಾರೆ. ಗಾಯಾಳು ಕುಟುಂಬಕ್ಕೆ ಸೂಕ್ತ ಪರಿಹಾರ ಅರಣ್ಯ ಇಲಾಖೆ ನೀಡುವಂತಾಗಬೇಕು ಎಂದೂ ಸಂಕೇತ್ಪೂವಯ್ಯ ಒತ್ತಾಯಿಸಿದ್ದಾರೆ. ಈಗಾಗಲೇ ಗಾಯಾಳು ಚಿಕಿತ್ಸೆಗೆ ರೂ.8000 ನಗದು ನೀಡಿರುವದಾಗಿ ತಿತಿಮತಿ ವಲಯಾರಣ್ಯಾಧಿಕಾರಿ ಗೋಪಾಲ್ ತಿಳಿಸಿದ್ದಾರೆ.