ಶ್ರೀಮಂಗಲ, ಆ. 17: ಇಲ್ಲಿಗೆ ಸಮೀಪ ಕುರ್ಚಿ ಗ್ರಾಮದ ಕೊಟ್ಟಿಗೆ ಮೇಲೆ ಧಾಳಿ ನಡೆಸಿದ ಹುಲಿ ಉಳುಮೆ ಮಾಡುತ್ತಿದ್ದ ಎತ್ತನ್ನು ಕೊಂದು ಹಾಕಿದೆ. ಕುರ್ಚಿ ಗ್ರಾಮದ ಬೋಡಂಗಡ ಗಣೇಶ್ ಕರುಂಬಯ್ಯ ಎಂಬವರಿಗೆ ಸೇರಿದ ಕೊಟ್ಟಿಗೆ ಮೇಲೆ ಇಂದು ಮುಂಜಾನೆ 3 ಗಂಟೆಗೆ ಹುಲಿ ಧಾಳಿ ನಡೆಸಿದೆ. ಈ ಸಂದರ್ಭ ಗಾಬರಿಗೊಂಡ ಎತ್ತು ಹಗ್ಗ ತುಂಡು ಮಾಡಿಕೊಂಡು ಕೊಟ್ಟಿಗೆಯಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿ ಸುಮಾರು ಅರ್ಧ ಕಿ.ಮೀ ದೂರ ಓಡಿದರೂ ಅದರ ಬೆಂಬಿಡದೆ ಅಟ್ಟಿಸಿದ ಹುಲಿ ನಾಟಿ ಮಾಡಿದ ಗದ್ದೆ ನಡುವೆಯೆ ಹಿಡಿದು ಕೊಂದು ಭಾಗಶಃ ತಿಂದಿದೆ. ಉಳುಮೆ ಮಾಡುತ್ತಿದ್ದ ಜೋಡಿ ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಒಂದು ದಿನಕ್ಕೆ ಮೊದಲೂ ಈ ಎತ್ತುಗಳ ಮೂಲಕ ಉಳುಮೆ ಕಾರ್ಯ ಮಾಡಲಾಗಿತ್ತು. ಇನ್ನೂ ಸ್ವಲ್ಪ ಭಾಗ ನಾಟಿ ಕೆಲಸ ಬಾಕಿ ಇದ್ದು ಉಳುಮೆ ಮಾಡುತ್ತಿದ್ದ ಜೋಡಿ ಎತ್ತುಗಳ ಪೈಕಿ ಒಂದು ಎತ್ತು ಹುಲಿ ಧಾಳಿಗೆ ತುತ್ತಾಗಿ ಸಾವಿಗೀಡಾಗಿದ್ದು ರೈತ ಗಣೇಶ್ ಕರುಂಬಯ್ಯ ಮುಂದಿನ ಕೃಷಿ ಕಾರ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಸ್ಥಳಕ್ಕೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಶಿಲ್ಪ ಮತ್ತು ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದರು