*ಗೋಣಿಕೊಪ್ಪಲು, ಸೆ. 21: ಬಾಳೆಲೆ ದೇವನೂರು ಗ್ರಾಮದ ಕೃಷಿಕ ಈರಪ್ಪ ಎಂಬವರಿಗೆ ಸೇರಿದ ಎತ್ತನ್ನು ಹುಲಿ ಮಂಗಳವಾರ ಧಾಳಿ ನಡೆಸಿ ಬಲಿ ತೆಗೆದುಕೊಂಡಿದೆ. ಲಕ್ಷ್ಮಣ ತೀರ್ಥ ನದಿ ದಡದಲ್ಲಿ ಎತ್ತನ್ನು ಮೇಯಲು ಕಟ್ಟಿ ಹಾಕಲಾಗಿತ್ತು. ಹಗಲಿನ ವೇಳೆಯಲ್ಲಿಯೇ ಹುಲಿ ಧಾಳಿ ನಡೆಸಿ ಉಳುಮೆಗೆ ಸಹಕಾರಿಯಾಗಿದ್ದ ಎತ್ತನ್ನು ಸಾಯಿಸಿದೆ. ರೂ. 30 ಸಾವಿರ ಬೆಲೆ ಬಾಳುತ್ತಿದ್ದ ಎತ್ತಿಗೆ ಅರಣ್ಯ ಇಲಾಖೆಯವರು ರೂ. 10 ಸಾವಿರ ಪರಿಹಾರ ಧನ ವಿತರಿಸಿದ್ದಾರೆ. ಈ ಹಣದಲ್ಲಿ ಮತ್ತೊಂದು ಎತ್ತನ್ನು ಕೊಂಡುಕೊಳ್ಳಲು ಸಾಧ್ಯವಾಗುವದಿಲ್ಲ ಎಂದು ಈರಪ್ಪ ತಮ್ಮ ಅಳಲು ತೋಡಿಕೊಂಡರು.

ಹುಲಿ ಸೆರೆಗೆ ಒತ್ತಾಯ

ಈ ಸಂಬಂಧ ಬುಧವಾರ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಪೃಥ್ಯು ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಕಳೆದ 5 ತಿಂಗಳ ಅವಧಿಯಲ್ಲಿ ಬಾಳೆಲೆ, ನಿಟ್ಟೂರು, ಕಾರ್ಮಾಡು,ಕೊಟ್ಟಗೇರಿ ಭಾಗದಲ್ಲಿ 8 ಜಾನುವಾರುಗಳು ಹುಲಿ ಧಾಳಿಗೆ ಬಲಿಯಾಗಿವೆ. ಅರಣ್ಯಾಧಿಕಾರಿಗಳು ಒಂದಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಕೃಷಿಕರು ಉಳುಮೆಗೆ ಜಾನುವಾರುಗಳಿಲ್ಲದೆ ಸಂಕಟ ಪಡುತ್ತಿದ್ದಾರೆ ಎಂದು ಪೃಥ್ಯು ದೂರಿದರು.

ಜಾನುವಾರುಗಳ ಮೇಲೆ ನಿರಂತರವಾಗಿ ಧಾಳಿ ನಡೆಸುತ್ತಿರುವ ಹುಲಿಯನ್ನು ಹಿಡಿಯಬೇಕು ಎಂದು ಒತ್ತಾಯಿಸಿದರೂ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹುಲಿ ಕಾಫಿ ತೋಟದಲ್ಲಿಯೇ ಅಡಗಿದ್ದು, ಮುಂದೊಂದು ದಿನ ಮನುಷ್ಯರ ಮೇಲೂ ಬೀಳುವ ಸಾಧ್ಯತೆ ಇದೆ. ಇಂತಹ ಘಟನೆ ಸಂಭವಿಸುವ ಮುನ್ನ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರದ ನಿರ್ದೇಶಕ ಮಣಿಕಂಠ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪೃಥ್ಯು, ಗುರುವಾರ 12 ಗಂಟೆ ಸ್ಥಳಕ್ಕೆ ಆಗಮಿಸಿ ಹುಲಿ ಸೆರೆ ಹಿಡಿಯುವ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಲ್ಲಳ್ಳ ಆರ್‍ಎಫ್‍ಓ ಶಿವರಾಂ ಅವರಿಗೆ ಮನವಿ ಪತ್ರ ಅರ್ಪಿಸಿ ಹುಲಿ ಸೆರೆ ಹಿಡಿಯಲು ಒತ್ತಾಯಿಸಲಾಯಿತು.

ಎತ್ತನ್ನು ಬಲಿತೆಗೆದುಕೊಂಡ ದೇವನೂರು ಲಕ್ಷ್ಮಣ ತೀರ್ಥ ನದಿ ದಡದಲ್ಲಿ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಬೋನಿಟ್ಟು ಕಾಯುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಅಚ್ಯುತ, ಸುಖೇಶ್, ಮುಖಂಡರಾದ ಅಡ್ಡೆಂಗಡ ಅರುಣ, ನವೀನ್ ಪಾಲ್ಗೊಂಡಿದ್ದರು.

ಚಿತ್ರ ವರದಿ :ಎನ್.ಎನ್.ದಿನೇಶ್