ಮಡಿಕೇರಿ, ಅ. 4: ಹುಲಿತಾಳದ ಸಮುದಾಯಭವನದಲ್ಲಿ ಉದ್ಯಮಶೀಲತಾ ಯುವ ಕಾರ್ಯಕ್ರಮ, ಕ್ರೀಡಾ ಸಚಿವಾಲಯ, ನೆಹರೂ ಯುವ ಕೆಂದ್ರ, ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ತಾಲೂಕು ಯುವ ಒಕ್ಕೂಟ ಹಾಗೂ ಸ್ಥಳೀಯ ಭಗತ್ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆ ನಡೆಯಿತು. ತಾಲೂಕು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಪಿ.ಪಿ. ಸುಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡುತ್ತಾ ಯುವಜನತೆ ಹರೆಯದ ಅಮಲಿನಲ್ಲಿ ಹಿರಿಯ ನಾಗರಿಕರನ್ನು ಕೇವಲವಾಗಿ ಕಾಣುತ್ತಿರುವದು ಖೇದಕರ. ಯುವ ಜನತೆ ತಾವೂ ಸರತಿ ಸಾಲಿನಲ್ಲೇ ಇದ್ದು, ಮುಂದೊಮ್ಮೆ ತಾವೂ ವಯೋವೃದ್ಧರಾಗುತ್ತೇವೆ ಎಂಬದನ್ನು ಮರೆಯಬಾರದು. ಹಿರಿಯರನ್ನು ಗೌರವದಿಂದ ಕಂಡು ಅವರ ಮಾರ್ಗದರ್ಶನದಲ್ಲಿ, ಜೀವನಾನುಭವ ಗಳನ್ನು ತಿಳಿದು ಸಾಗಬೇಕಾಗಿದೆ ಎಂದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಭಾರತ-ಪಾಕ್ ಹಾಗೂ ಭಾರತ- ಚೀನಾ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಎಂ. ಚಂಗಪ್ಪ, ಹಿರಿಯ ವೈದ್ಯ ಪಿ. ಶಿವ ಸುಬ್ರಹ್ಮಣ್ಯ ಭಟ್, ನಿವೃತ್ತ ಶಿಕ್ಷಕಿ ಹೆಚ್.ಎಸ್. ಸಾವಿತ್ರಿ, ಹಿರಿಯ ಜಾನಪದ ವಾದ್ಯ ಕಲಾವಿದÀ ರಾಮು, ಹಿರಿಯ ಕೃಷಿಕ ಬಿ.ಎ. ಮುತ್ತಣ್ಣ ಇವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಇದೇ ಸಂದರ್ಭದಲ್ಲಿ ತಮ್ಮ ಜೀವನಾನುಭವಗಳನ್ನು ಹಂಚಿಕೊಂಡು ಯುವಜನತೆಗೆ ಕಿವಿಮಾತುಗಳನ್ನಾಡಿದರು. ಯುವಕ ಸಂಘದ ಅಧ್ಯಕ್ಷ ಹೆಚ್.ಎಂ. ವಿನೋದ್ ಅಧ್ಯಕ್ಷತೆ ವಹಿಸಿದ್ದರು.

ಯುವಕ ಸಂಘದ ಗೌರವಾಧ್ಯಕ್ಷ ಪಿ.ಎಸ್. ರವಿಕೃಷ್ಣ ನಿರೂಪಿಸಿ, ಕಾರ್ಯದರ್ಶಿ ಎಂ. ಭರತ್ ಕುಮಾರ್ ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.

- ರವಿಕೃಷ್ಣ .ಪಿ.ಎಸ್