ಮಡಿಕೇರಿ, ಜ. 23: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ತಾ. 30ರಂದು ಹುತಾತ್ಮರ ದಿನಾಚರಣೆ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆ ಯಲ್ಲಿ, ಸರ್ವೋದಯ ಸಮಿತಿ ಅಧ್ಯಕ್ಷರು ಹಾಗೂ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ ತಾ. 30ರಂದು ಹುತಾತ್ಮರ ದಿನಾಚರಣೆ ಅಂಗವಾಗಿ ಜಿಲ್ಲಾ ಖಜಾನೆಯಲ್ಲಿರಿಸಲಾಗಿರುವ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಹೊರತೆಗೆದು ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್, ಭಾರತ ಸೇವಾ ದಳ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಯಲ್ಲಿ ನಗರದ ಮುಖ್ಯರಸ್ತೆ ಮೂಲಕ ನಗರದ ಗಾಂಧಿ ಮಂಟಪಕ್ಕೆ ತೆರಳಿ ಬೆಳಗ್ಗೆ 11 ಗಂಟೆಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವದು ನಡೆದುಕೊಂಡು ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಈಗ ಜಿಲ್ಲಾ ಖಜಾನೆಯ ಕಚೇರಿ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರ ವಾಗಿರುವದರಿಂದ ಜಿಲ್ಲಾ ಖಜಾನೆ ಯಿಂದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೂಲಕ ಮೆರವಣಿಗೆ ಸಾಗಿ ಗಾಂಧಿ ಮಂಟಪಕ್ಕೆ ತೆರಳುವಂತಾಗ ಬೇಕು ಎಂದು ಅವರು ಸಲಹೆ ಮಾಡಿದರು.

ಹುತಾತ್ಮರ ದಿನಾಚರಣೆ ಅಂಗವಾಗಿ ಗಾಂಧಿ ಮಂಟಪದ ಬಳಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳು ವದು. ಸರ್ವಧರ್ಮ ಶಾಂತಿಯನ್ನು ಸಾರುವ ಸಂದೇಶಗಳನ್ನು ತಿಳಿಸುವದು ಮತ್ತಿತರ ಕಾರ್ಯಗಳು ನಡೆದುಕೊಂಡು ಬಂದಿವೆ ಎಂದು ಅವರು ತಿಳಿಸಿದರು.

ನಗರದ ಗಾಂಧಿ ಮಂಟಪ ಬಳಿ ರಾಜ್‍ಘಾಟ್ ಮಾದರಿಯಲ್ಲಿ ‘ಗಾಂಧಿ ಸ್ಮಾರಕ’ ನಿರ್ಮಿಸುವ ಸಂಬಂಧ ಈಗಾಗಲೇ ನೀಲಿ ನಕಾಶೆ ತಯಾರಿಸಲಾಗಿದ್ದು, ಒಂದು ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿ ಯವರಲ್ಲಿ ಕೋರಲಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಟಿ.ಪಿ.ರಮೇಶ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ ಹುತಾತ್ಮರ ದಿನಾಚರಣೆ ಸಂಬಂಧ ಭಾರತದ ಸ್ವಾತಂತ್ರ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವನ್ನು ತಿಳಿಸುವಂತಹ ಸರ್ವಧರ್ಮ ಪ್ರಾರ್ಥನೆ ಮಾಡಲು ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡುವಂತೆ ಅವರು ಸಲಹೆ ಮಾಡಿದರು. ಪೌರಾಯುಕ್ತರಾದ ಬಿ.ಶುಭ, ಸರ್ವೋದಯ ಸಮಿತಿ ಸದಸ್ಯರಾದ ಕೋಡಿ ಚಂದ್ರಶೇಖರ, ಎಸ್.ಪಿ. ವಾಸುದೇವ, ಅಂಬೆಕಲ್ ಕುಶಾಲಪ್ಪ, ಅಂಬೆಕಲ್ ನವೀನ್, ಕೆ.ಎಂ. ವೆಂಕಟೇಶ್, ಎಂ.ಎನ್. ಸುಬ್ರಮಣಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸಂಘಟಕರಾದ ದಮಯಂತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಳ್ಳಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮೃತ್ಯುಂಜಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಚಂದ್ರಕಾಂತ್, ನಗರಸಭೆಯ ಆರೋಗ್ಯ ಅಧಿಕಾರಿ ಎಚ್.ಆರ್. ರಮೇಶ್, ಆರ್.ಪಿ. ಚಂದ್ರಶೇಖರ, ಮಣಜೂರು ಮಂಜುನಾಥ್ ಮತ್ತಿತರರು ಇದ್ದರು.