ಕುಶಾಲನಗರ, ಜು. 8: ಮಡಿಕೇರಿಯ ಲಾಡ್ಜ್ನಲ್ಲಿ ನೇಣಿಗೆ ಶರಣಾದ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಅಂತ್ಯಕ್ರಿಯೆ ಹುಟ್ಟೂರಾದ ರಂಗಸಮುದ್ರದಲ್ಲಿ ಶುಕ್ರವಾರ ಸಂಜೆ ನಡೆಯಿತು. ಕೊಡವ ಸಂಪ್ರದಾಯ ದಂತೆ ಧಾರ್ಮಿಕ ವಿಧಿವಿಧಾನಗಳು ನಡೆದು ಸಕಲ ಸರಕಾರ ಗೌರವ ಗಳೊಂದಿಗೆ ಗಣಪತಿ ತಂದೆಯವರಿಗೆ ಸೇರಿದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರುವದರೊಂದಿಗೆ ಅವರ ಶವ ಪಂಚಭೂತಗಳಲ್ಲಿ ಲೀನವಾಯಿತು.
ಮಡಿಕೇರಿಯಿಂದ ಮಧ್ಯಾಹ್ನ 1 ಗಂಟೆಗೆ ರಂಗಸಮುದ್ರದ ಮನೆಗೆ ಆಂಬ್ಯುಲೆನ್ಸ್ ವಾಹನದಲ್ಲಿ ಮೃತದೇಹವನ್ನು ತಂದು ಕುಟುಂಬ ಸದಸ್ಯರು ಕೊಡವ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ನೂರಾರು ಸಂಖ್ಯೆಯಲ್ಲಿ ಜನರು ಅಂತಿಮದರ್ಶನ ಪಡೆದರು.
ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ, ಜಿಲ್ಲೆಯ ಶಾಸಕರು ಗಳಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್
ಮಾಜಿ ಸದಸ್ಯ ಗೊ. ಮಧುಸೂದನ್, ಬಿಜೆಪಿ ಜಿಲ್ಲಾಧ್ಯಕ್ಷ ಮನುಮುತ್ತಪ್ಪ, ಪ್ರಮುಖರಾದ ಎಸ್.ಎನ್.ರಾಜಾರಾವ್ ಸೇರಿದಂತೆ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು
ಗಣಪತಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.
(ಮೊದಲ ಪುಟದಿಂದ) ಜಿಲ್ಲಾ ಸಶಸ್ತ್ರ ದಳದ ಇನ್ಸ್ಪೆಕ್ಟರ್ ಕೆ.ಬಿ.ದೇವಯ್ಯ ಅವರ ನೇತೃತ್ವದಲ್ಲಿ ಸಕಲ ಸರಕಾರಿ ಗೌರವ ಸಲ್ಲಿಸಲಾಯಿತು. ಕುಶಲತೋಪುಗಳನ್ನು ಸಿಡಿಸುವ ಮೂಲಕ ಸಂತಾಪ ಸಲ್ಲಿಸಲಾಯಿತು.
ಹುಟ್ಟೂರಿಗೆ ತಮ್ಮ ಪುತ್ರನ ಮೃತದೇಹ ಆಗಮಿಸಿದ ಸಂದರ್ಭ ತಂದೆ ಎಂ.ಕೆ.ಕುಶಾಲಪ್ಪ ಮತ್ತು ತಾಯಿ ಪೊನ್ನಮ್ಮ ಅವರು ದುಃಖತಪ್ತರಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವಲ್ಲಿ ತೊಡಗಿಸಿಕೊಂಡ ದೃಶ್ಯ ಮನಕಲಕುವಂತಿತ್ತು. ಸಹೋದರ ಹಾಗೂ ರಾಮನಗರದ ಡಿವೈಎಸ್ಪಿ ಆಗಿರುವ ತಮ್ಮಯ್ಯ ಹಾಗೂ ಇನ್ನೋರ್ವ ಸಹೋದರ ಮಾಚಯ್ಯ ಅವರುಗಳು ಮತ್ತು ಕುಟುಂಬ ಸದಸ್ಯರು ಸೇರಿದಂತೆ ನೂರಾರು ಜನ ಅಂತಿಮ ನಮನದ ನಂತರ ಗಣಪತಿ ಮೃತದೇಹಕ್ಕೆ ಅವರ ತಂದೆಯವರಿಗೆ ಸೇರಿದ ತೋಟದಲ್ಲಿ ಗಣಪತಿಯವರ ಹಿರಿಯ ಪುತ್ರ ನೆಹಲ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಡಾ.ವಿ.ಆರ್.ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರುಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಜನಪ್ರತಿನಿಧಿಗಳು ಗಣಪತಿ ಅವರ ಪೋಷಕರನ್ನು ಸಂತೈಸಿದರು.
ಈ ಸಂದರ್ಭ ರಂಗಸಮುದ್ರದ ರಸ್ತೆಯುದ್ದಕ್ಕೂ ನೂರಾರು ಪೊಲೀಸರು ಬಿಗಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದರು. ಕುಶಾಲನಗರ ಡಿವೈಎಸ್ಪಿ ಟಿ.ಕುಮಾರ್, ವೀರಾಜಪೇಟೆಯ ಡಿವೈಎಸ್ಪಿಗಳಾದ ಕುಮಾರ್ಚಂದ್ರ, ನಾಗಪ್ಪ, ವೃತ್ತ ನಿರೀಕ್ಷಕರುಗಳಾದ ಕರೀಂ ರಾವುತರ್, ಪ್ರದೀಪ್, ರಾಜು, ಪ್ರಸನ್ನಕುಮಾರ್ ನೇತೃತ್ವದಲ್ಲಿ 200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಪೊಲೀಸರು ಸೇರಿದಂತೆ ಮೈಸೂರು ಗ್ರಾಮಾಂತರ ಠಾಣೆಗಳ ಹಲವು ಅಧಿಕಾರಿಗಳು, ಸಿಬ್ಬಂದಿಗಳು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.