ಮಡಿಕೇರಿ, ನ. 12: ಹಿರಿಯ ನಾಗರಿಕರಿಗೆ ಸರ್ಕಾರದಿಂದ ಇಲಾಖೆಯಡಿ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಹಿರಿಯ ಇಲಾಖೆಯಿಂದ ಗುರುತಿಸಲ್ಪಟ್ಟ 5 ಸ್ವಯಂ ಸೇವಾ ಸಂಸ್ಥೆಗಳಾದ ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ, ಸರ್ಕಾರಿ ನೌಕರರ ಸಂಘ, ಮಡಿಕೇರಿ, ಹಿರಿಯ ನಾಗರಿಕರ ಫೋರಂ ಮಡಿಕೇರಿ, ಕೊಡಗು ಜಿಲ್ಲಾ ನಿವೃತ್ತ ಉದ್ಯೋಗಸ್ಥರ ಸಂಘ, ಕ್ಲಾಕ್ ಟವರ್ ಹತ್ತಿರ ವೀರಾಜಪೇಟೆ, ನಂ.1126ನೇ ಸೋಮವಾರಪೇಟೆ ತಾಲೂಕು ಸಹಕಾರ ಕೂಟ ನಿಯಮಿತ ಸೋಮವಾರಪೇಟೆ, ಶ್ರೀ ಮಹಾಲಿಂಗೇಶ್ವರ ವಿದ್ಯಾಸಂಸ್ಥೆ (ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ) ಸುಳುಗಳಲೆ, ಶನಿವಾರಸಂತೆ, ಸೋಮವಾರಪೇಟೆ ತಾಲೂಕು ಈ ಸಂಸ್ಥೆಗಳ ಮೂಲಕ 60 ವರ್ಷ ಮೇಲ್ಪಟ್ಟ ಎಲ್ಲಾ ಪುರುಷ ಮತ್ತು ಮಹಿಳಾ ಹಿರಿಯ ನಾಗರಿಕರಿಗೆ ರೂ.50 ಗಳನ್ನು ಮಾತ್ರ ಪಡೆದು ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ.
ವೃದ್ಧಾಪ್ಯ ವೇತನ: ವೃದ್ಧಾಪ್ಯದಲ್ಲಿ ಮಕ್ಕಳು ಮತ್ತು ಇತರ ಕುಟುಂಬದ ಸದಸ್ಯರಿಂದ ನಿರ್ಲಕ್ಷ್ಯಕ್ಕೊಳಗಾದ ಬಡ ಕುಟುಂಬದ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಾಹೆಯಾನ ರೂ.400ಗಳ ಮಾಸಾಶನವನ್ನು ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ ಮಂಜೂರು ಮಾಡುತ್ತಾರೆ.
ಸಂಧ್ಯಾ ಸುರಕ್ಷಾ ಯೋಜನೆ: ಮಕ್ಕಳು ಮತ್ತು ಕುಟುಂಬದ ಸದಸ್ಯರಿಂದ ತ್ಯಜಿಸಲ್ಪಟ್ಟ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಹೆಯಾನ 400 ರೂ. ಮಾಸಾಶನವನ್ನು ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ರವರು ಮಂಜೂರು ಮಾಡುತ್ತಾರೆ.
ಹಗಲು ಯೋಗಕ್ಷೇಮ: ಆಯ್ದ ಹಿಂದುಳಿದ ಜಿಲ್ಲೆಗಳಲ್ಲಿ ವಯೋವೃದ್ಧರು ಶಾಂತ ಚಿತ್ತರಾಗಿ ಕಾಲ ಕಳೆದು ಚಟುವಟಿಕೆಯಿಂದ ಇರಲು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಹಗಲು ಯೋಗಕ್ಷೇಮ ಕೇಂದ್ರಗಳನ್ನು ತೆರೆದು ಉಚಿತ ಉಪಹಾರ, ಮನರಂಜನೆ ವೈದ್ಯಕೀಯ ಸೌಲಭ್ಯ ಇನ್ನಿತರ ಸವಲತ್ತುಗಳನ್ನು ಒದಗಿಸಲಾಗುತ್ತಿದೆ.
ಸಹಾಯವಾಣಿ: ವಯೋವೃದ್ಧರು ತಾವು ಇರುವ ಸ್ಥಳದಲ್ಲಿಯೇ ತಮಗಾಗಿರುವ ತೊಂದರೆ, ಶೋಷಣೆ ಇತ್ಯಾದಿಗಳಿಂದ ಹೊರಬರಲು ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಕಮಿಷನರ್ ಅವರ ಸಹಯೋಗದೊಂದಿಗೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಚಿತ ದೂರವಾಣಿ ಸಂಖ್ಯೆ.1090ರ ಮೂಲಕ ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಿ ಸೇವೆಯನ್ನು ಪಡೆಯಬಹುದಾಗಿರುತ್ತದೆ.
ಪ್ರಯಾಣದಲ್ಲಿ ರಿಯಾಯಿತಿ: 60 ವರ್ಷ ದಾಟಿದ ವಯೋವೃದ್ಧರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಕರ್ನಾಟಕದಾದ್ಯಂತ ಪ್ರಯಾಣಿಸಲು ರೈಲಿನಲ್ಲಿಯೂ ಸಹ ಶೇ.25 ರ ರಿಯಾಯಿತಿ ಲಭ್ಯವಿರುತ್ತದೆ. ಭಾರತದಾದ್ಯಂತ ಪ್ರಯಾಣಿಸಲು ರೈಲಿನಲ್ಲಿಯೂ ಸಹ ಶೇ.25ರ ರಿಯಾಯಿತಿಯ ಸೌಲಭ್ಯವಿರುತ್ತದೆ.
ಹೆಚ್ಚಿನ ಬಡ್ಡಿ: 60 ವರ್ಷ ಮೇಲ್ಪಟ್ಟ ವೃದ್ಧರು ಬ್ಯಾಂಕ್ ಠೇವಣಿಗೆ ಪ್ರಸ್ತುತ ಸಾಮಾನ್ಯ ಬಡ್ಡಿ ದರಕ್ಕಿಂತ ಶೇ.1 ರಷ್ಟು ಹೆಚ್ಚಿನ ಬಡ್ಡಿಯನ್ನು ಕೊಡುವ ಸೌಲಭ್ಯ ಎಲ್ಲಾ ಬ್ಯಾಂಕುಗಳಲ್ಲಿಯೂ ಲಭ್ಯವಿರುತ್ತದೆ.
ಸಂಚಾರಿ ಆರೋಗ್ಯ ಕೇಂದ್ರ: ಗ್ರಾಮಾಂತರ ಪ್ರದೇಶದಲ್ಲಿನ ವೃದ್ಧರಿಗೆ ಆರೋಗ್ಯ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಒದಗಿಸಲು ಅನುಕೂಲವಾಗುವಂತೆ ನುರಿತ ವೈದ್ಯರನ್ನೊಳಗೊಂಡ ಸ್ವಯಂ ಸೇವಾ ಸಂಸ್ಥೆ / ಆಸ್ಪತ್ರೆಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ.
ಪ್ರಶಸ್ತಿ: ಕಲೆ, ಸಾಹಿತ್ಯ, ಕ್ರೀಡೆ ಕಾನೂನು ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹಿರಿಯ ನಾಗರಿಕರಿಂದ ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸ್ವೀಕರಿಸಿ ರಾಜ್ಯ ಮಟ್ಟದ ಸಮಿತಿಯಿಂದ ಆಯ್ಕೆಗೊಂಡ ಹಿರಿಯ ನಾಗರಿಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವದು.
ರಕ್ಷಣೆ ಕಾಯಿದೆ: ಹಿರಿಯ ನಾಗರಿಕರು ತಮ್ಮ ಪೋಷಣೆ, ರಕ್ಷಣೆ ಹಾಗೂ ಇನ್ನಿತರ ತೊಂದರೆಗೆ ಒಳಗಾದಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳಲ್ಲಿ ದೂರು ದಾಖಲಿಸಿ, ಅಗತ್ಯವಾದ ನೆರವು ಪಡೆಯಬಹುದಾಗಿದೆ..
ವೃದ್ಧಾಶ್ರಮಗಳು: ಕುಟುಂಬದ ಸದಸ್ಯರಿಂದ ತಿರಸ್ಕರಿಸಲ್ಪಟ್ಟ ಬಡ, ನಿರ್ಗತಿಕ ವೃದ್ಧರಿಗಾಗಿ ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ಶ್ರೀ ಶಕ್ತಿ ವೃದ್ಧಾಶ್ರಮ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಸೋಮವಾರಪೇಟೆ ತಾಲೂಕಿನ ಕೂಡಿಗೆಯಲ್ಲಿ ಶ್ರೀ ಶಕ್ತಿ ವೃದ್ಧಾಶ್ರಮಗಳು ಕಾರ್ಯ ನಿರ್ವಹಿಸುತ್ತಿದ್ದು ಈ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವೃದ್ಧಾಶ್ರಮಗಳನ್ನು ಪ್ರಾರಂಭಿಸಿ, ಉಚಿತ ಊಟ, ವಸತಿ, ಮನರಂಜನೆ ಹಾಗೂ ಆರೋಗ್ಯ ಸೌಲಭ್ಯ ವಾಚನಾಲಯ ಇತ್ಯಾದಿ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.