ಸೋಮವಾರಪೇಟೆ,ಸೆ.25: ಹಿಂದೂ ಮಲಯಾಳಿ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. 10ಲಕ್ಷ ಹಾಗೂ ವೈಯಕ್ತಿವಾಗಿ ರೂ. 1ಲಕ್ಷ ನೀಡುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದರು.
ಹಿಂದೂ ಮಲಯಾಳಿ ಸಮಾಜದ ವತಿಯಿಂದ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಓಣಂ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಲಯಾಳಿ ಬಾಂಧವರು ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜನಾಂಗದ ಬೆಳವಣಿಗೆಗೆ ಶ್ರಮಿಸಬೇಕೆಂದು ಶಾಸಕರು ಇದೇ ಸಂದರ್ಭ ಕರೆ ನೀಡಿದರು.
ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಹಣವನ್ನು ಕ್ರೊಢೀಕರಿಸಿ ಧನ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳ ಬೇಕು. ಪ್ರಪಂಚದ ಎಲ್ಲಾ ಕಡೆಗಳಲ್ಲಿ ಮಲಯಾಳಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಕ್ಷರತೆಗೂ ಹೆಚ್ಚು ಒತ್ತು ನೀಡುತ್ತಿರುವದು ಶ್ಲಾಘನೀಯ ಎಂದು ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಮಲಯಾಳಿ ಬಾಂಧವರು ಓಣಂ ಉತ್ಸವವನ್ನು ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಆಚರಿಸುವ ಮೂಲಕ ಮಲಯಾಳ ಸಂಸ್ಕøತಿಯನ್ನು ಜಿಲ್ಲೆಯ ಜನತೆಗೆ ಪರಿಚಯಿಸುತ್ತಿರುವದು ಉತ್ತಮ ಬೆಳವಣಿಗೆ. ಎಲ್ಲರೊಂದಿಗೂ ಸೌಹಾರ್ದಯುತವಾಗಿ ಬೆರೆಯುವ ಮೂಲಕ ಸಮಾಜದ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಮಲಯಾಳಿ ಕೈಪಿಡಿಯನ್ನು ಬಿಡುಗಡೆ ಮಾಡಿದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಇಂದು ಪ್ರಪಂಚದಲ್ಲಿ ಅಶಾಂತಿಯ ವಾತಾವರಣ ಎದುರಾಗಿದ್ದು, ದೇಶವು ಇದರಿಂದ ಭಿನ್ನವಾಗಿಲ್ಲ. ಕೆಲವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಜನರ ನಡುವೆ ಶಾಂತಿ ಸಾಮರಸ್ಯ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಹಬ್ಬದಾಚರಣೆಗಳು ಜನಾಂಗದ ನಡುವೆ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿಂದೂ ಮಲಯಾಳಿ ಸಮಾಜದ ಸಲಹೆಗಾರ ವಿ.ಕೆ. ಲೋಕೇಶ್, ಜಿಲ್ಲೆಯ ಜನಾಂಗಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಿಂದೂ ಮಲಯಾಳಿ ಸಂಘವನ್ನು ಹುಟ್ಟು ಹಾಕಲಾಗಿದೆ. ಜನಾಂಗದ ಅಭಿವೃಧ್ದಿಗೆ ಪ್ರತಿಯೊಬ್ಬರೂ ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ನಡೆಸಲಾಗುವದು ಎಂದರು.
ಅಧ್ಯಕ್ಷತೆಯನ್ನು ತಾಲೂಕು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಪಿ.ಡಿ. ಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಕುಶಾಲನಗರದ ಸಮಾಜದ ಅಧ್ಯಕ್ಷ ಶಿವನ್, ವೀರಾಜಪೇಟೆಯ ಹರ್ಷವರ್ಧನ್, ಸುಂಟಿಕೊಪ್ಪದ ಪಿ.ಸಿ. ಮೋಹನ್, ಚೆಟ್ಟಳ್ಳಿಯ ಶಶಿಕುಮಾರ್, ಮೂರ್ನಾಡಿನ ಬಾಬು, ಮರಗೋಡಿನ ಬಾಲಕೃಷ್ಣನ್, ಕಾಜೂರು ಎಸ್.ಎನ್.ಡಿ.ಪಿ. ಅಧ್ಯಕ್ಷ ಭಾಸ್ಕರ್ ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ಸಮಾಜ ಬಾಂಧವರು ಉತ್ಸವ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ ನೇತೃತ್ವದಲ್ಲಿ ಸ್ಥಳೀಯ ಮುತ್ತಪ್ಪ ದೇವಾಲಯದ ಬಳಿಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾವಿರಾರು ಮಂದಿ ಸಮಾಜ ಬಾಂಧವರು ಮೆರವಣಿಗೆಯಲ್ಲಿ ತೆರಳಿದರು.
ಇದೇ ಸಂದರ್ಭ ಸಿಂಗಾರಿ ಮೇಳ ವಾದ್ಯಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಮಾಜದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಉತ್ಸವದ ಅಂಗವಾಗಿ ಜನಾಂಗ ಬಾಂಧವರಿಗೆ ಪೂಕಳಂ ಮತ್ತು ನೃತ್ಯ ಸ್ಪರ್ಧೆ ನಡೆಯಿತು.