ಸೋಮವಾರಪೇಟೆ, ಆ.1: ಭಾರತೀಯ ಜನತಾ ಪಾರ್ಟಿ ಸೇರಿದಂತೆ ಸಂಘ ಪರಿವಾರದವರಿಂದ ಹಿಂದುತ್ವದ ಆಧಾರದ ಮೇಲೆ ದೇಶದ ಪ್ರಜಾಪ್ರಭುತ್ವವನ್ನು ಅಳಿಸಿ ಹಾಕುವ ಯತ್ನ ನಡೆಯುತ್ತಿದ್ದು, ಈ ಬಗ್ಗೆ ಜಾಗೃತಿ ವಹಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಅಗತ್ಯತೆಯಿದೆ ಎಂದು ಮಾಜೀ ವಿಧಾನ ಪರಿಷತ್ ಸದಸ್ಯ ಎ.ಕೆ. ಸುಬ್ಬಯ್ಯ ಹೇಳಿದರು.

ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಮೋದಿ ಪ್ರಧಾನಿಯಾದ ನಂತರ ದಲಿತ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದೆ. ಗೋವುಗಳ ವಿಷಯದಲ್ಲಿ ಮನುಧರ್ಮ ಶಾಸ್ತ್ರವನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಷ್ಟೇ ಅಲ್ಲ ; ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯದಲ್ಲೂ ದಲಿತ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಬಿಜೆಪಿ ಅಧಿಕಾರವಿರುವ ರಾಜ್ಯದಲ್ಲಿ ಮಾತ್ರ ಇಂತಹ ದೌರ್ಜನ್ಯಗಳಿಗೆ ರಾಜಾಶ್ರಯ

ದೊರೆಯುತ್ತದೆ ಎಂದು ದೂರಿದರು. ದೇಶದಲ್ಲೇ ಅತಿಹೆಚ್ಚು ದನದ ಮಾಂಸವನ್ನು ರಪ್ತು ಮಾಡುತ್ತಿರುವ ರಾಜ್ಯ ಗುಜರಾತ್. ಅಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿರುವ ದಲಿತರ ಮೇಲೆ ಗೋರಕ್ಷಣೆ ಹೆಸರಿನಲ್ಲಿ ಹಲ್ಲೆ ಮಾಡಿರುವದು ಅಮಾನವೀಯ. ರಫ್ತುದಾರರು ದನಗಳನ್ನು ಸಾಕುವದಿಲ್ಲ. ಇವರಿಗೆ ಗೋಶಾಲೆಗಳಿಂದ ದನಗಳ ಪೂರೈಕೆಯಾಗುತ್ತದೆ. ಇಂತಹ ಕಂಪೆನಿಗಳ ಮಾಲೀಕರುಗಳಲ್ಲಿ ಬಿಜೆಪಿಯವರಿದ್ದಾರೆ.

ಹಿಂದುತ್ವ ಮತ್ತು ದಲಿತೋದ್ಧಾರ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ರಾಜ್ಯಾಂಗದಲ್ಲಿ ಮನುಧರ್ಮವನ್ನು ತುರುಕುವ ತಂತ್ರ ನಡೆಯುತ್ತಿದೆ. ಈ ಕಾರಣದಿಂದಲೆ, ದಲಿತರ, ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುವ ಮೂಲಕ ಭಯ ಹುಟ್ಟಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದರು.

ಜಿ.ಪಂ. ಮಾಜೀ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯವನ್ನು ಮನುಕುಲ ಖಂಡಿಸಬೇಕು. ಪುರೋಹಿತಶಾಹಿ ದಬ್ಬಾಳಿಕೆ ವಿರುದ್ಧ ದೇಶದ ಬಹುಸಂಖ್ಯಾತರು ಹೋರಾಟ ಮಾಡಬೇಕು ಎಂದು ಹೇಳಿದರು. ದೇಶದ ಬಹುಸಂಖ್ಯಾತರ ಆಹಾರ ಪದ್ದತಿಗೆ ವಿರೋಧ ವ್ಯಕ್ತಪಡಿಸುವ ಅಧಿಕಾರವನ್ನು ಸಂಘ ಪರಿವಾರದವರಿಗೆ ಕೊಟ್ಟವರು ಯಾರು? ದನ ಹಿಡಿದು ಪ್ರಚಾರ ಪಡೆದವರು ನಂತರ ಬಿಜೆಪಿ ಟಿಕೇಟ್ ಗಿಟ್ಟಿಸುತ್ತಿದ್ದಾರೆ. ಗೋವಿನ ವಿಚಾರ ಇದೀಗ ವೋಟ್ ಬ್ಯಾಂಕ್ ಆಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಮಂಜುನಾಥ್‍ಕುಮಾರ್ ಮಾತನಾಡಿ, ದೇಶದಲ್ಲಿನ ಅಶಾಂತಿಗೆ ಐಸೀಸ್, ಅಲ್‍ಖೈದಾ ಸಂಘಟನೆಗಳು ಕಾರಣವಲ್ಲ; ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಹಿಡಿದ, ಗೋವಿನ ವಿಚಾರದಲ್ಲಿ ಹಲ್ಲೆಗಳನ್ನು ಮಾಡುವ ಮನಸ್ಥಿತಿಯವರೇ ಕಾರಣ ಎಂದು ದೂಷಿಸಿದರು. ಬಿವಿಎಸ್ ಜಿಲ್ಲಾ ಕಾರ್ಯದರ್ಶಿ ಮೋಹನ್ ಮೌರ್ಯ ಮಾತನಾಡಿ, ದೇಶದಲ್ಲಿ ಕೇವಲ ಬಾವುಟಕ್ಕೆ ಬೆಲೆ;ಮನುಷ್ಯರಿಗಿಲ್ಲ. ಕೊಡಗಿನಲ್ಲಿ ಸತ್ತ ದನವನ್ನು ವಿಲೇವಾರಿ ಮಾಡುವದಿಲ್ಲ ಎಂದು ನಿರ್ಧಾರ ಕೈಗೊಳ್ಳುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ, ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಜಯಪ್ಪ ಹಾನಗಲ್, ವಕೀಲ ಈಶ್ವರಚಂದ್ರ ವಿದ್ಯಾಸಾಗರ್ ಅವರುಗಳು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ತಾಲೂಕು ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡ ಎಚ್.ಎಂ.ಸೋಮಪ್ಪ, ದಲಿತ ಒಕ್ಕೂಟದ ಟಿ.ಈ.ಸುರೇಶ್, ಎಚ್.ಬಿ.ಜಯಮ್ಮ, ಪ.ಪಂ. ಸದಸ್ಯರಾದ ಮೀನಾಕುಮಾರಿ, ಕೆ.ಎ. ಆದಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಗೂ ಮುನ್ನ ಇಲ್ಲಿನ ಬಾಣಾವರ ರಸ್ತೆಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಘೋಷಣೆ ಕೂಗಿದರು.