ಭಾಗಮಂಡಲ, ಆ. 31: ಗದ್ದಲ, ಹಾಸ್ಯದ ನಡುವೆ ಭಾಗಮಂಡಲ ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಭಾಗಮಂಡಲ ಗೌಡ ಸಮಾಜದಲ್ಲಿ ನಡೆಯಿತು.
ನಿಗದಿತ ಸಮಯಕ್ಕೆ ಸಭೆಯು ಆರಂಭವಾಗುತ್ತಿದ್ದಂತೆ, ಗ್ರಾಮಸ್ಥರು ಅಧಿಕಾರಿಗಳು ಬಂದಿದ್ದರೆ ಮಾತ್ರ ಸಭೆ ನಡೆಸಿ ಎಂದರು. ಅಧಿಕಾರಿಗಳು ತಮ್ಮ ಪರಿಚಯ ಮಾಡುತ್ತಿದ್ದಂತೆಯೇ ಕೆಲವು ಪ್ರಮುಖ ಇಲಾಖೆಯ ಅಧಿಕಾರಿಗಳು ಬಾರದ ಕಾರಣ ಸಭೆ ನಡೆಸಲು ಬಿಡುವದಿಲ್ಲ. ಅಧಿಕಾರಿಗಳು ಮುಖ್ಯವಾಗಿ ಇರಬೇಕು, ಅಧಿಕಾರಿ ಗಳನ್ನು ಕರೆಯಿರಿ ಮತ್ತೆ ಸಭೆ ನಡೆಯಲಿ ಎಂದು ವೇದಿಕೆಯ ಮುಂದೆ ಬಂದು ಪಟ್ಟು ಹಿಡಿದರು. ಆ ನಂತರ ಅಧಿಕಾರಿಗಳಿಗೆ ಕರೆ ಮಾಡಿದಾಗ ತಕ್ಷಣ ಅಧಿಕಾರಿಗಳು ಹಾಜರಾದರು. ನಂತರ ಅಜಂಡಾದಂತೆ ಸಭೆ ಆರಂಭವಾಯಿತು.
ಸೀಮೆಎಣ್ಣೆ ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಆಗಬೇಕು ಎಂದು ಕೆ.ಜೆ. ಭರತ್ ಹೇಳಿದರು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿ ಉತ್ತಯ್ಯ ಸಭೆಯಲ್ಲಿ ನಿರ್ಣಯ ಮಾಡಿಕೊಡಿ ಅದನ್ನು ಮೇಲಧಿಕಾರಿಗೆ ಕಳುಹಿಸಲಾಗುವದು. ಪಡಿತರ ವಸ್ತು ಪಡೆಯಲು ಆಧಾರ್ ನೋಂದಣಿ ಮಾಡದೇ ಇರುವವರು ಕೂಡಲೇ ಮಾಡಿಸಿಕೊಳ್ಳಿ ಎಂದರು.
ತೋಟಗಾರಿಕಾ ಇಲಾಖೆಯ ಅಧಿಕಾರಿ ವಸಂತ್ ಮಾತನಾಡಿ, ಜೇನು ಕೃಷಿ ತರಬೇತಿ ಭಾಗಮಂಡಲ ದಲ್ಲಿ ಮುಂದಿನ ತಿಂಗಳು ನಡೆಯಲಿದೆ. ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದರು.
ಪೊಲೀಸ್ ವಿರುದ್ಧ ಕ್ರಮಕ್ಕೆ ಆಗ್ರಹ
ಗಂಭೀರವಾದ ಚರ್ಚೆಗೆ ಗ್ರಾಸವಾದ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿ ಇರುವ ಶ್ರೀನಿವಾಸ್ ಎಂಬ ಸಿಬ್ಬಂದಿ ಠಾಣೆಗೆ ಹೋದವರಿಗೆ ಅವಮಾನಿಸುತ್ತಾರೆ. ಅಲ್ಲದೆ ಕೆಲವರಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅಲ್ಲದೆ ಕೆಲವು ಪೊಲೀಸ್ ಪೇದೆಗಳು ಮದ್ಯದ ಅಂಗಡಿಯಲ್ಲಿ ಮದ್ಯ ಸೇವಿಸುತ್ತಾರೆ. ಈ ಬಗ್ಗೆ ವೀಡಿಯೋ ಚಿತ್ರಣವಿದೆ. ಕೂಡಲೇ ಅವರುಗಳನ್ನು ವರ್ಗಾವಣೆ ಮಾಡಬೇಕು.15 ದಿನದ ನಂತರ ಠಾಣೆಯಲ್ಲಿ ಪ್ರತಿಭಟನೆ ಮಾಡಲಾಗುವದು ಎಂದು ಕೀರ್ತಿ ಮತ್ತು ರವಿ ಅವರುಗಳು ಆರೋಪಿಸಿದರು. ರಾತ್ರಿ ವೇಳೆ ತಪಾಸಣೆ ಆಗಬೇಕು. ಗಡಿಭಾಗದಲ್ಲಿ ನಿರಂತರ ವಾಗಿ ವಾಹನ ತಪಾಸಣೆ ನಡೆಸಬೇಕು ಎಂದು ನಾರಾಯಣ ಆಚಾರ್ ಹೇಳಿದರು. ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಿಬೇಕು ಎಂದು ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಂತರ ಠಾಣಾಧಿಕಾರಿ ಸದಾಶಿವಯ್ಯ ಮಾತನಾಡಿ, ಸಿಬ್ಬಂದಿ ಬಗ್ಗೆ ದೂರು ಗಳು ಇದ್ದು, ಮೇಲಧಿಕಾರಿಗೆ ಈಗಾಗಲೇ ಕಳುಹಿಸುವದಾಗಿ ಸಭೆಗೆ ತಿಳಿಸಿದರು.
ಇತ್ತೀಚಿನ ದಿನದಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗಿದ್ದು, ಅರಣ್ಯ ಇಲಾಖೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿಲ್ಲ. ಪರಿಹಾರ ನಮಗೆ ಮುಖ್ಯವಲ್ಲ ಎಂದು ನಂಜುಂಡಪ್ಪ ಹೇಳಿದರು. ದೇವಟ್ ಪರಂಬು ಪ್ರಕರಣದಲ್ಲಿ ಜಿಲ್ಲೆಯಲ್ಲಿ ಅಶಾಂತಿಗೆ ವಲಯ ಅರಣ್ಯಾಧಿಕಾರಿಯೇ ಕಾರಣ. ಸಂಘಟನೆಯನ್ನು ಅರಣ್ಯಕ್ಕೆ ಪ್ರವೇಶ ಮಾಡಲು ಬಿಟ್ಟಿರುವದೇ ಮೂಲ ಕಾರಣವಾಗಿದೆ. ಈಗ ನೆಟ್ಟಿರುವ ಕಲ್ಲುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡು ಯಥಾಸ್ಥಿತಿ ಕಾಪಾಡಬೇಕು. ಗ್ರಾಮ ಸಭೆಗೆ ಹಾಜರಾದರೆ ಸಾರ್ವಜನಿಕರಿಗೆ ಉತ್ತರ ಕೊಡಬೇಕು ಎಂದು ತಪ್ಪಿಸಿ ಕೊಳ್ಳುತ್ತಿದ್ದಾರೆ ಎಂದು ಕುದುಪಜೆ ಪ್ರಕಾಶ್ ರಾಜೀವ್ ಅರಣ್ಯಾಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯ ಇಲಾಖೆಯ ಸರದಿ ಬಂದಾಗ ಕಳೆದ ವರ್ಷ ಜಾತ್ರೆಯ ಸಂದರ್ಭ ಕಳೆನಾಶಕ ಸಿಂಪಡಿಸಿ ಅದರ ನೀರು ಕಾವೇರಿಗೆ ಸೇರಿ ಜಲಚರಗಳು ಸತ್ತಿರುತ್ತದೆ ಅದಕ್ಕೆ ಅವಕಾಶ ಕೊಡಬೇಡಿ. ಭಾಗಮಂಡಲದಲ್ಲಿ ಬಸ್ ತಂಗುದಾಣವಾಗಬೇಕು, ಬ್ರಹ್ಮಗಿರಿ ಅವಕಾಶ ಕೊಡಬೇಕು, ಭಾಗಮಂಡಲ ದಲ್ಲಿ ಸಾರ್ವಜನಿಕ ಶೌಚಾಲಯವಾಗ ಬೇಕು, ಭಾಗಮಂಡಲ ವ್ಯಾಪ್ತಿಯಲ್ಲಿ ಬೋರ್ವೆಲ್ಗಳಿಗೆ ಅವಕಾಶ ನೀಡಬಾರದು, ತಣ್ಣಿಮಾನಿಯಲ್ಲಿ ನೀರಿನ ಘಟಕ ಸ್ಥಾಪನೆಗೆ ಪರವಾನಗಿ ನೀಡಬಾರದು ಎಂಬಿತ್ಯಾದಿ ಆಗ್ರಹಗಳು ಕೇಳಿ ಬಂದವು.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಸುಮಿತ್ರ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿ ಗಿರೀಶ್ ಆಗಮಿಸಿದ್ದರು. ತಾ.ಪಂ. ಸದಸ್ಯೆ ಸಂಧ್ಯಾ, ಪಿಡಿಓ ಅಶೋಕ್, ಉಪಾಧ್ಯಕ್ಷೆ ಭವಾನಿ ಹರೀಶ್ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.