ಕುಶಾಲನಗರ, ಆ. 6: ಕೊಡಗಿನ ಏಕೈಕ ಬೃಹತ್ ಜಲಾಶಯ ಹಾರಂಗಿ ಪ್ರಸಕ್ತ ಭದ್ರತೆಯ ಕೊರತೆ ಎದುರಿಸುತ್ತಿದೆ. ಕಳೆದ ಮೂರು ದಶಕಗಳಿಂದ ಉಗ್ರರ ಬೆದರಿಕೆಯ ನೆಪದಲ್ಲಿ ಅಣೆಕಟ್ಟೆಗೆ ನಿರಂತರ ಭದ್ರತೆ ಒದಗಿಸಿದರೂ ಜಲಾಶಯದ ಒಳಭಾಗದಲ್ಲಿ ಮಾತ್ರ ಅಭದ್ರತೆ ತಾಂಡವವಾಡುತ್ತಿರುವ ದೃಶ್ಯ ಗೋಚರಿಸಿದೆ.

ಜಲಾಶಯದ ಭದ್ರತೆಗೆಂದು ಕೊಡಗು ಜಿಲ್ಲಾ ಸಶಸ್ತ್ರ ದಳದ ಸಿಬ್ಬಂದಿಗಳು ಹಗಲು ರಾತ್ರಿ ಕರ್ತವ್ಯ ನಿಭಾಯಿಸುತ್ತಿರುವದು ಒಂದೆಡೆ ಕಾಣಬಹುದು. ಆದರೆ ಹಲವೆಡೆ ಜಲಾಶಯಕ್ಕೆ ಯಾವದೇ ರೀತಿಯ ಸಮರ್ಪಕ ರಕ್ಷಣಾ ವ್ಯವಸ್ಥೆ ಕಂಡುಬರುತ್ತಿಲ್ಲ. ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಅಲ್ಲಲ್ಲಿ ರೆಸಾರ್ಟ್‍ಗಳು ತಲೆ ಎತ್ತಿದ್ದು, ದಿನನಿತ್ಯ ಸಾವಿರಾರು ಪ್ರವಾಸಿಗರು ಹಿನ್ನೀರಿನಲ್ಲಿ ಅಕ್ರಮವಾಗಿ ಬೋಟಿಂಗ್, ರ್ಯಾಫ್ಟಿಂಗ್‍ನಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾನ್ಯವಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಇಂತಹ ದೃಶ್ಯಗಳನ್ನು ಕಂಡರೂ ಕಾಣದಂತೆ ಇರುವದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ ಎನ್ನುವದು ಈ ಭಾಗದ ನಾಗರಿಕರ ಆರೋಪವಾಗಿದೆ. ಹಾರಂಗಿ ಅಣೆಕಟ್ಟೆಯ ಕಣ್ಣಳತೆ ದೂರದಲ್ಲಿ ಎರಡು ತಟಗಳಲ್ಲಿ ಹಲವು ಪ್ರವಾಸಿ ಕೇಂದ್ರಗಳು ತಲೆ ಎತ್ತಿದ್ದು, ಇಲ್ಲಿ ದೇಶ-ವಿದೇಶಗಳ ಪ್ರವಾಸಿಗರು ನೆಲೆ ಕಾಣುತ್ತಿದ್ದು, ಈ ಮೂಲಕ ಅಣೆಕಟ್ಟೆಗೆ ಅಪಾಯ ಉಂಟಾಗುವ ಸಾಧ್ಯತೆ ಅಧಿಕವಾಗಿದೆ. ಇದಕ್ಕೆ ನಿಯಂತ್ರಣ ತರುವಲ್ಲಿ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮ ಸಂಪೂರ್ಣ ವಿಫಲವಾಗಿದೆ ಎನ್ನಬಹುದು.

ಇನ್ನೊಂದೆಡೆ ಮೀನುಗಾರಿಕೆ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ಜಲಾಶಯದ ಒಳಭಾಗದಲ್ಲಿ ಶೆಡ್‍ಗಳನ್ನು ನಿರ್ಮಿಸಿದ್ದು ಮಕ್ಕಳು, ವೃದ್ಧರೆನ್ನದೆ ಹಲವು ಕುಟುಂಬ ಸದಸ್ಯರು ಇಲ್ಲಿ ಠಿಕಾಣಿ ಹೂಡಿರುವದು ಅಪಾಯದ ಮುನ್ಸೂಚನೆಗೆ ಜ್ವಲಂತ ಸಾಕ್ಷಿ ಎಂದರೆ ತಪ್ಪಾಗಲಾರದು.

ಹಾರಂಗಿ ಪ್ರವಾಸಿ ಮಂದಿರದ ಎದುರು ಭಾಗದಲ್ಲಿ 10 ಕ್ಕೂ ಅಧಿಕ ಪ್ಲಾಸ್ಟಿಕ್ ಶೆಡ್‍ಗಳು ನಿರ್ಮಾಣಗೊಂಡಿದ್ದು ಇಲ್ಲಿ ಅಂದಾಜು 40 ಕ್ಕೂ ಅಧಿಕ ವ್ಯಕ್ತಿಗಳು ವಾಸವಾಗಿರುವ ದೃಶ್ಯ ಕಂಡುಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಜಾವಗಲ್ ಬಳಿಯ ಟಿಬಿ ಕಾವಲ್ ವ್ಯಾಪ್ತಿಯ ಕುಟುಂಬ ಸದಸ್ಯರು ಹಾರಂಗಿ ಹಿನ್ನೀರಿನಲ್ಲಿ ಮೀನು ಹಿಡಿಯುವ ಕೆಲಸಕ್ಕೆ ಆಗಮಿಸಿದ್ದು ಮಕ್ಕಳೊಂದಿಗೆ ಮಹಿಳೆಯರು ಸೇರಿದಂತೆ 40 ಕ್ಕೂ ಅಧಿಕ ಮಂದಿ ಹಾರಂಗಿ ಜಲಾಶಯದ ಆವರಣದಲ್ಲಿ ಠಿಕಾಣಿ ಹೂಡಿದ್ದಾರೆ. ಈ ಕುಟುಂಬ ಸದಸ್ಯರಿಗೆ ಮೀನುಗಾರಿಕಾ ಇಲಾಖೆ ಜಲಾಶಯದಲ್ಲಿ ಮೀನು ಹಿಡಿಯಲು ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಅವಕಾಶ ಕಲ್ಪಿಸಿದೆ. ಮೀನು ಹಿಡಿಯುವ ಗುತ್ತಿಗೆಗೆ ಬಂದ ವ್ಯಕ್ತಿಗಳಿಗೆ ನೆಲೆಸಲು ಮೀನುಗಾರಿಕಾ ಇಲಾಖೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸದಿರುವದೇ ಈ ಅವಾಂತರಕ್ಕೆ ಪ್ರಮುಖ ಕಾರಣ ಎನ್ನಬಹುದು.

ಈ ವಿಷಯಕ್ಕೂ ತಮಗೂ ಯಾವದೇ ಸಂಬಂಧವಿಲ್ಲ ಎನ್ನುತ್ತಾರೆ ಅಣೆಕಟ್ಟೆಯ ಉಸ್ತುವಾರಿ ಅಧಿಕಾರಿಯಾಗಿರುವ ನಾಗರಾಜ್. ಕಳೆದ ಹಲವು ವರ್ಷಗಳಿಂದ ಮೀನುಗಾರಿಕೆ ಗುತ್ತಿಗೆಯನ್ನು ಸಂಬಂಧಿಸಿದ ಇಲಾಖೆ ನೀಡುತ್ತಿದೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಜಲಾಶಯದ ಆವರಣದಲ್ಲಿಯೇ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ ಎನ್ನುವದು ಅವರ ಪ್ರತಿಕ್ರಿಯೆಯಾಗಿದೆ. ಭದ್ರತೆ ನೆಪದಲ್ಲಿ ಪ್ರವಾಸಿಗರಿಗೆ ಅಣೆಕಟ್ಟೆ ಮೇಲ್ಭಾಗ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸದ ಇಲಾಖೆ ಅಧಿಕಾರಿಗಳು ಅಪರಿಚಿತ ಕುಟುಂಬಗಳಿಗೆ ಜಲಾಶಯದ ಆವರಣದಲ್ಲಿ ನೆಲೆ ನೀಡಿರುವದು ನಿಜಕ್ಕೂ ದುರಂತ ಎನ್ನಬಹುದು.

ಮೀನುಗಾರಿಕೆ ಗುತ್ತಿಗೆ ಪಡೆದುಕೊಂಡ ಮಂದಿ ಕೇವಲ ಶೆಡ್ ನಿರ್ಮಿಸಿರುವದಲ್ಲದೆ ಹಲವು ಕುಟುಂಬಗಳು ಇಲ್ಲಿ ನೆಲೆಸಿರುವದೇ ಸಂಶಯಕ್ಕೆ ಗ್ರಾಸವಾಗಿರುವ ವಿಷಯವಾಗಿದೆ. ಕೆಲವು ಯುವಕರು ಬೈಕ್‍ಗಳಲ್ಲಿ ಜಲಾಶಯದ ಒಳ ಆವರಣಕ್ಕೆ ಬಂದು ತೆರಳುತ್ತಿರುವದು ಕೂಡ ಕಂಡುಬರುತ್ತಿದೆ. ಆವರಣದಲ್ಲಿ ಕೆಲವು ಬೈಕ್‍ಗಳು ನಿಲುಗಡೆಗೊಂಡಿರುವದು ಕಂಡುಬಂದಿದೆ. ಇಲ್ಲಿ ನೆಲೆ ನಿಂತಿರುವ ಬಹುತೇಕ ವ್ಯಕ್ತಿಗಳು ಅಪರಿಚಿತರಾಗಿದ್ದು, ಇವರ ಬಗ್ಗೆ ನಿಗಾವಹಿಸುವ ಯಾವದೇ ವ್ಯವಸ್ಥೆ ಇಲ್ಲಿ ಇಲ್ಲದಿರುವದು ನಿಜಕ್ಕೂ ದುರಂತ ಎನ್ನಬಹುದು. ಈ ನಿವಾಸಿಗಳಿಗೆ ಸ್ಥಳೀಯ ಯಾವದೇ ದಾಖಲೆಗಳು ಕೂಡ ಇಲ್ಲದಿರುವದು ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ಖಚಿತಗೊಂಡಿದೆ. ತಾವು ಚಿಕ್ಕಮಗಳೂರು ಜಿಲ್ಲೆಯ ಟಿಬಿ ಕಾವಲ್ ವ್ಯಾಪ್ತಿಯಿಂದ ಆಗಮಿಸಿದ್ದು, ಇಲಾಖೆಯಿಂದ ಮೀನು ಹಿಡಿಯಲು ಗುತ್ತಿಗೆ ಪಡೆದಿರುವದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕುಟುಂಬ ಸದಸ್ಯರು ನಮ್ಮೊಂದಿಗೆ ನೆಲೆಸಿರುವದಾಗಿ ತಂಡದ ಸದಸ್ಯನೊಬ್ಬ ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ತಮ್ಮಲ್ಲಿ ಮೂರು ಮಂದಿಗೆ ಮೀನುಗಾರಿಕೆ ಇಲಾಖೆ ವಾರ್ಷಿಕ ಗುತ್ತಿಗೆ ನೀಡಿದೆ ಎಂದು ಮಾಹಿತಿ ಒದಗಿಸಿದ್ದಾರೆ.

ಒಂದೆಡೆ ಅಣೆಕಟ್ಟೆ ಕಾಯಲು ಜಿಲ್ಲಾ ಸಶಸ್ತ್ರದಳ ಪೊಲೀಸರು. ಇನ್ನೊಂದೆಡೆ ಈ ಅಪರಿಚಿತರ ಬಗ್ಗೆ ಕನಿಷ್ಟ ಮಾಹಿತಿ ಕೂಡ ಈ ಪೊಲೀಸರಿಗಾಗಲೀ, ಅಣೆಕಟ್ಟೆ ಅಧಿಕಾರಿಗಳಿಗಾಗಲೀ ಇಲ್ಲದಿರುವದು ಅಪಾಯಕ್ಕೆ ಎಡೆಮಾಡಿದಂತಾಗುತ್ತದೆ ಎನ್ನುವದು ಸ್ಥಳೀಯರ ಆರೋಪವಾಗಿದೆ. ಅಲ್ಲದೆ ಜಲಾಶಯದ ಬದಿಯಲ್ಲಿ ಈ ಕುಟುಂಬದ ಮಕ್ಕಳು ಆಟವಾಡುತ್ತಿದ್ದು, ಇದು ಕೂಡ ಅಪಾಯವನ್ನು ಆಹ್ವಾನಿಸುವ ಸಾಧ್ಯತೆ ಅಧಿಕವಾಗಿದೆ. ಈ ಬಗ್ಗೆ ಕುಶಾಲನಗರ ಡಿವೈಎಸ್ಪಿ ಟಿ. ಕುಮಾರ್ ಅವರಿಗೆ ‘ಶಕ್ತಿ’ ಪ್ರತಿನಿಧಿ ಮಾಹಿತಿ ಒದಗಿಸಿದ್ದು, ಕೂಡಲೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಮೈಸೂರಿನ ನ್ಯಾಯಾಲಯವೊಂದರಲ್ಲಿ ಸ್ಫೋಟ ಪ್ರಕರಣ ನಡೆದಿದ್ದು, ಈ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆ ಪ್ರದೇಶದ ಸೂಕ್ತ ಭದ್ರತೆಗೆ ಪೊಲೀಸ್ ಹಾಗೂ ಅಣೆಕಟ್ಟೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದರೊಂದಿಗೆ ಮುಂದೆ ಉಂಟಾಗಲಿರುವ ಅನಾಹುತಗಳಿಗೆ ಕಡಿವಾಣ ಹಾಕುವಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ.

- ಚಂದ್ರಮೋಹನ್