ಕುಶಾಲನಗರ, ಜು. 22: ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕಗೊಂಡ ಹಿನೆÀ್ನಲೆಯಲ್ಲಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯಕ್ಕೆ ಇಂದು 10 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಹರಿದು ಬಂದಿದ್ದು ನದಿಗೆ 4 ಕ್ರೆಸ್ಟ್‍ಗೇಟ್‍ಗಳ ಮೂಲಕ ಸೇರಿದಂತೆ ಒಟ್ಟು 8172 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗಿದೆ ಎಂದು ಹಾರಂಗಿ ಅಣೆಕಟ್ಟೆ ವಿಭಾಗದ ಸಹಾಯಕ ಅಭಿಯಂತರ ನಾಗರಾಜು ತಿಳಿಸಿದ್ದಾರೆ. ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು 2858.40 ಮಟ್ಟ ಕಾಯ್ದುಕೊಂಡು ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 8.29 ಟಿಎಂಸಿ ಪ್ರಮಾಣದ ನೀರು ಸಂಗ್ರಹ ಇರುವದಾಗಿ ಅವರು ತಿಳಿಸಿದ್ದಾರೆ. ಇದುವರೆಗೆ ಒಟ್ಟು 11.48 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು ನದಿಗೆ 3.84 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ. ನದಿ ಪಾತ್ರದಲ್ಲಿ ಇದುವರೆಗೆ 391.6 ಎಂಎಂ ಪ್ರಮಾಣದ ಮಳೆ ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ. ತುಂಬಿದ ಹಾರಂಗಿ ಜಲಾಶಯಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ತಾ. 23ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಬಾಗಿನ ಅರ್ಪಿಸಲಿದ್ದಾರೆ. ಈ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉಪಸ್ಥಿತರಿರುವರು ಎಂದು ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.