ಕೂಡಿಗೆ, ಜು. 9: ಇಲ್ಲಿಗೆ ಸಮೀಪದ ಹಾರಂಗಿ ಅಣೆಕಟ್ಟೆಯು ಬಹುತೇಕ ಭರ್ತಿಯಾಗುತ್ತಿದೆ. ಹಾರಂಗಿ ಜಲಾಶಯದ ಮೇಲ್ಭ್ಬಾಗದ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಪರಿಣಾಮ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣವು ಅಧಿಕವಾಗುತ್ತಿದೆ. ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಿಗೂ ಸಂತಸ ಮೂಡಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಸಿದ್ಧತೆ ನಡೆಸಿದ್ದಾರೆ.
ಗರಿಷ್ಠ ಮಟ್ಟ ತಲುಪಲು 2 ಅಡಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಆದೇಶಕ್ಕೆ ಕಾಯುತ್ತಿ ರುವ ಅಧಿಕಾರಿಗಳು ಪರ್ಯಾಯ ವಾಗಿ 1000 ಕ್ಯೂಸೆಕ್ಸ್ ನೀರನ್ನು ಸಮೀಪದಲ್ಲಿರುವ ವಿದ್ಯುತ್ ಉತ್ಪಾದಕ ಇಡಿಸಿಎಲ್ ಘಟಕದ ಮೂಲಕ ಎಸ್ಕೇಪ್ ಕ್ಯಾನಲ್ ಮೂಲಕ ನೀರನ್ನು ಹರಿಬಿಡಲಾಗುತ್ತಿದೆ.
ಈ ಸಂದರ್ಭ ಇಡಿಸಿಎಲ್ ಮುಖ್ಯ ಇಂಜಿನಿಯರ್ ಶಿವ ಸುಬ್ರಹ್ಮಣ್ಯಂ ಮಾತನಾಡಿ, ಇಡಿಸಿಎಲ್ ಘಟಕದ ಎರಡು ಯಂತ್ರಗಳಲ್ಲಿ ಒಂದು ಯಂತ್ರವು ಇಂದಿನಿಂದ ಪ್ರಾರಂಭ ವಾಗಿದ್ದು, ಎರಡು ಮೆಗಾವ್ಯಾಟ್ ವಿದ್ಯುತ್ಚ್ಛಕ್ತಿ ಉತ್ಪಾದನೆಯಾಗುತ್ತಿದೆ. ಸದ್ಯದಲ್ಲೇ ಎರಡನೇ ಯಂತ್ರಕ್ಕೂ ಕೂಡಾ ಚಾಲನೆ ದೊರೆತು ಪೂರ್ಣ ಪ್ರಮಾಣದ ವಿದ್ಯುತ್ಚ್ಛಕ್ತಿ ಉತ್ಪಾದನೆ ಮಾಡಲಾಗುವದು ಎಂದು ಹೇಳಿದರು. ಈ ಸಂದರ್ಭ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, 10,000 ಕ್ಯೂಸೆಕ್ಕ್ಕೂ ಹೆಚ್ಚು ನೀರು ಬರುತ್ತಿದೆ. ಅಣೆಕಟ್ಟೆಯು ಬಹುತೇಕ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಟ್ಟೆಯ ಹಿತದೃಷ್ಟಿಯಿಂದ ನೀರಿನ ಸಂಗ್ರಹವನ್ನು ನೋಡಿ ಇಂದು ಅಥವಾ ನಾಳೆ ನದಿಗೆ ಹೆಚ್ಚುವರಿ ನೀರನ್ನು ಹರಿಬಿಡಲಾಗುವದು ಎಂದು ತಿಳಿಸಿದರು. ಅಲ್ಲದೆ ಹಾರಂಗಿ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸಿ ಕೊಳ್ಳುವಂತೆ ಸೂಚನೆ ನೀಡಲಾಗಿದೆ.