ಕೂಡಿಗೆ, ಆ. 14: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿರುವ ಜಿಲ್ಲೆ ಪ್ರಮುಖ ಜಲಾಶಯವಾದ ಹಾರಂಗಿ ನೀರಾವರಿ ಯೋಜನೆಯ ಅಡಿಯಲ್ಲಿ ಮುಖ್ಯ ನಾಲೆಯಲ್ಲಿ ಈಗಾಗಲೆ ನೀರು ಹರಿಸಿರುವದರಿಂದ ಕೊಡಗು ಜಿಲ್ಲೆಯ ಗಡಿ ಭಾಗವಾದ ಶಿರಂಗಾಲದವರೆಗಿನ ಗ್ರಾಮಗಳಾದ ತೊರೆನೂರು, ಹೆಬ್ಬಾಲೆ, ಕೂಡಿಗೆ, ಮದಲಾಪುರ, ಹುದುಗೂರು ವ್ಯಾಪ್ತಿಗಳು ಭತ್ತದ ನಾಟಿ ಚುರುಕುಗೊಂಡಿದ್ದು, ಈಗಾಗಲೇ ಶೇ.75 ಭಾಗದಷ್ಟು ನಾಟಿ ಕೆಲಸ ಮುಗಿದಿದ್ದು, ಇನ್ನುಳಿದ ಭಾಗದ ನಾಟಿ ಚುರುಕಿನಿಂದ ಸಾಗಿದೆ.

ಈ ವ್ಯಾಪಿಯ ಮಣ್ಣಿಗೆ ಅನುಗುಣವಾದ ಬೆಳೆಗಳಾದ ಐಆರ್64, ತನು, ರಾಜಮುಡಿ ಸೇರಿದಂತೆ ಹೈಬ್ರಿಡ್ ತಳಿಗಳ ಸಸಿ ಮಡಿಗಳನ್ನು ಮಾಡಿ ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಸಿದ್ದಗೊಳಿಸಿ ನಾಟಿ ಕಾರ್ಯದಲ್ಲಿ ಈ ವ್ಯಾಪ್ತಿಯ ರೈತರು ತೊಡಗಿರುವದು ಕಂಡುಬರುತ್ತಿದೆ.

ಹಾರಂಗಿ ಅಣೆಕಟ್ಟಿನಿಂದ ಮುಖ್ಯ ನಾಲೆಗೆ 1500 ಕ್ಯೂಸೆಕ್ಸ್ ನೀರನ್ನು ಹರಿಸಿರುವದರಿಂದ ಮುಖ್ಯ ನಾಲೆಯ ಮೂಲಕ ನೀರು ಹರಿದು ಕಣಿವೆ ಗ್ರಾಮದ ಸಮೀಪದಲ್ಲಿ ಎಡ ದಂಡೆ ಮತ್ತು ಬಲ ದಂಡೆಯ ಮೂಲಕ ನೀರು ಹರಿಯುತ್ತಿದ್ದು, ಎಡ ದಂಡೆಯ ನಾಲೆ ನೀರು ಕೊಡಗಿನ ಗಡಿ ಪ್ರದೇಶ ಶಿರಂಗಾಲದವರೆಗೆ ಹರಿದು ಮುಂದೆ ಸಾಗಿದೆ. ಸಹಕಾರ ಸಂಘಗಳಿಂದ ಈಗಾಗಲೇ ರೈತರುಗಳಿಗೆ ಮಣ್ಣಿನ ಅನುಗುಣಕ್ಕೆ ತಕ್ಕಂತೆ ರಾಸಾಯನಿಕ ಗೊಬ್ಬರ ದಾಸ್ತಾನು, ಕಳೆನಾಶಕ ಸೇರಿದಂತೆ ವಿವಿಧ ಗೊಬ್ಬರಗಳ ದಾಸ್ತಾನನ್ನು ರೈತರುಗಳು ಸದುಪಯೋಗಪಡಿಸಿ ಕೊಂಡು ತಮ್ಮ ಜಮೀನಿಗೆ ನಾಟಿ ಸಂದರ್ಭ ರಸಗೊಬ್ಬರಗಳನ್ನು ಹಾಕುತ್ತಿರುವದು ಕಂಡುಬರುತ್ತಿದೆ. ಅಲ್ಲದೆ, ಈ ಭಾರಿ ಹೆಚ್ಚು ಯಾಂತ್ರಿಕೃತ ಟ್ರ್ಯಾಕ್ಟರ್‍ಗಳನ್ನೇ ಅವಲಂಬಿಸಿ ಉಳುಮೆ ಮಾಡಿ, ನಾಟಿ ಕಾರ್ಯದಲ್ಲಿ ತೊಡಗಿರುವದು ಹೆಚ್ಚಾಗಿದೆ. ಈ ವ್ಯಾಪ್ತಿ ಜಮೀನಿನ ರೈತರು ಹಾರಂಗಿ ನೀರನ್ನು ಸದುಪಯೋಗಪಡಿಸಿಕೊಂಡು ಭತ್ತದ ನಾಟಿ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

-ಕೆ.ಕೆ ನಾಗರಾಜಶೆಟ್ಟಿ.